ಹೈದರಾಬಾದ್: ಮಹಿಳೆಯೊಬ್ಬಳು ಬಸ್ ನಿಲ್ಲಿಸಲಿಲ್ಲ ಎಂದು ಬಸ್ಸಿನ ಕನ್ನಡಿ ಒಡೆದು ಕಂಡಕ್ಟರ್ ಮೇಲೆ ಹಾವು ಎಸೆದ ವಿಚಿತ್ರ ಘಟನೆ ನಡೆದಿದೆ.
ಮಹಿಳೆಯೊಬ್ಬರು ಆರ್ ಟಿಸಿ ಬಸ್ ನಿಲ್ಲಿಸಲು ಪ್ರಯತ್ನಪಟ್ಟರೂ ಆರ್ ಟಿಸಿ ಬಸ್ ನಿಲ್ಲಿಸದ ಕಾರಣ ಗಲಾಟೆ ಮಾಡಿದ್ದಾರೆ. ಕುಡಿದು ಮತ್ತಿನಲ್ಲಿ ಖಾಲಿ ಬಿಯರ್ ಬಾಟಲಿಯಿಂದ ಬಸ್ಸಿನ ಕನ್ನಡಿ ಒಡೆದಿದ್ದಾಳೆ. ಬಳಿಕ ತನ್ನೊಂದಿಗೆ ತಂದಿದ್ದ ಹಾವನ್ನು ಬಸ್ ಕಂಡಕ್ಟರ್ ಮೇಲೆ ಎಸೆದ ಅಘಟಕಾರಿ ಘಟನೆ ಹೈದರಾಬಾದ್ ನ ವಿದ್ಯಾನಗರದ ಮುಖ್ಯರಸ್ತೆಯಲ್ಲಿ ಗುರುವಾರ (ಆ.8) ನಡೆದಿದೆ.
ಹೈದರಾಬಾದ್ ನಗರದ ದಮ್ಮಾಯಿಗುಡಾದ ಬೇಗಂ ಅಲಿಯಾಸ್ ಫಾತಿಮಾ ಬೀಬಿ ಅಲಿಯಾಸ್ ಆಸಿಮ್ (65) ಗುರುವಾರ ಸಂಜೆ ವಿದ್ಯಾನಗರ ಛೇದಕದಲ್ಲಿ ದಿಲ್‌ಸುಖ್‌ನಗರ ಡಿಪೋಗೆ ಸೇರಿದ 107 ವಿ/ಎಲ್ ಬಸ್ ನಿಲ್ಲಿಸಿದ್ದರು. ಅದೇ ಸಮಯಕ್ಕೆ ಬಸ್ ಸಿಕಂದರಾಬಾದ್‌ನಿಂದ ಎಲ್‌ಬಿ ನಗರ ಕಡೆಗೆ ಹೋಗುತ್ತಿತ್ತು. ವಿದ್ಯಾನಗರ ಬಸ್ ನಿಲ್ದಾಣದ ನಂತರ ಸಿಗ್ನಲ್ ಫ್ರೀ ಲೆಫ್ಟ್ ನಲ್ಲಿ ಬಸ್ ತಿರುಗುತ್ತಿದ್ದಾಗ ಮಹಿಳೆ ಬಸ್ ನಿಲ್ಲಿಸಲು ಯತ್ನಿಸಿದ್ದಾರೆ. ಆದರೆ ಅದು ಒಂದು ಮೂಲೆ ಮತ್ತು ಜನಸಂದಣಿ ಇದ್ದ ಕಾರಣ ಚಾಲಕ ಬಸ್ ಅನ್ನು ಅಲ್ಲಿ ನಿಲ್ಲಿಸಲಿಲ್ಲ. ಇದರಿಂದ ಕೋಪಗೊಂಡ ಮಹಿಳೆ ಖಾಲಿ ಬಿಯರ್ ಬಾಟಲಿಯನ್ನು ಬಸ್ ಮೇಲೆ ಎಸೆದಿದ್ದಾಳೆ. ಇದರಿಂದ ಬಸ್‌ನ ಹಿಂಬದಿಯ ಕನ್ನಡಿ ಒಡೆದಿದೆ. ಇದನ್ನು ಗಮನಿಸಿದ ಚಾಲಕ ತಕ್ಷಣ ಬಸ್ ನಿಲ್ಲಿಸಿ ಅದೇ ಬಸ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಂಡಕ್ಟರ್ ಸ್ವಪ್ನಾ ಓಡಿ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಅವಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿರೂ ಸಾಧ್ಯವಾಗಲಿಲ್ಲ. ಆಗ ಬೇಗಂ ತನ್ನ ಬ್ಯಾಗ್‌ನಲ್ಲಿ ಹಾವು ಇದೆ ಎಂದು ಕಂಡಕ್ಟರ್‌ಗೆ ಬೆದರಿಕೆ ಹಾಕಿದ್ದಾಳೆ.
ಆದರೂ ಕಂಡಕ್ಟರ್ ಹೆದರದ ಕಾರಣ ಚೀಲದಿಂದ ನಾಲ್ಕು ಅಡಿ ಉದ್ದದ ಹಾವನ್ನು (ಜೆರ್ರಿಪುಟು) ತೆಗೆದು ಕಂಡಕ್ಟರ್ ಮೇಲೆ ಎಸೆದಿದ್ದಾಳೆ. ಅದು ಸ್ವಪ್ನಾಳ ಮೈ ಮೇಲೆ ಬಿದ್ದು ನೆಲಕ್ಕೆ ಜಾರಿತು. ಮಹಿಳೆಯ ಈ ಕೃತ್ಯಕ್ಕೆ ಪ್ರಯಾಣಿಕರು ಹಾಗೂ ಸ್ಥಳೀಯರು ಭಯ ಭೀತರಾಗಿ ಓಡಿದ್ದಾರೆ.
ಆರ್‌ಟಿಸಿ ಅಧಿಕಾರಿಗಳು ಮಹಿಳೆಯ ವಿರುದ್ಧ ಹೈದರಾಬಾದ್ ಕಮಿಷನರೇಟ್ ನಲ್ಲಕುಂಟಾ ಪಿಎಸ್‌ನಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬೇಗಂ ಅವರನ್ನು ವಶಕ್ಕೆ ಪಡೆದಿದ್ದಾರೆ. ಹಾವಿಗಾಗಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಆಕೆ ಮದ್ಯದ ಅಮಲಿನಲ್ಲಿದ್ದುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಈ ಘಟನೆ ಕುರಿತು ಟಿಜಿಎಸ್‌ಆರ್‌ಟಿಸಿ ಎಂಡಿ ಸಜ್ಜನರ್ ಪ್ರತಿಕ್ರಿಯೆ ನೀಡಿದ್ದು ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಮೇಲೆ ಹಾಗೂ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸುವ ಬಸ್‌ಗಳ ಮೇಲೆ ದಾಳಿ ನಡೆಸಿ ಭಯ ಹುಟ್ಟಿಸುತ್ತಿರುವುದು ವಿಷಾದನೀಯ. ಟಿಜಿಎಸ್‌ಆರ್‌ಟಿಸಿ ಆಡಳಿತ ಮಂಡಳಿ ಇಂತಹ ಘಟನೆಗಳನ್ನು ನಿರ್ಲಕ್ಷಿಸುವುದಿಲ್ಲ. ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.