ಟುಲ್ಸಾ: ಮಾಲೀಕ ಸೇರಿದಂತೆ ಮನೆಯ ಸದಸ್ಯರೆಲ್ಲಾ ಖಾಸಗಿ ಕಾರಣ ನಿಮಿತ್ತ ಬೇರೆಡೆ ತೆರಳಿದ್ದರು. ಮನೆಯಲ್ಲಿ ಎರಡು ಸಾಕು ನಾಯಿ ಬಿಟ್ಟರೆ ಯಾರೂ ಇಲ್ಲ. ಮನೆಯನ್ನು ಕಳ್ಳಕಾಕರಿಂದ ಕಾಯಬೇಕಿದ್ದ ನಾಯಿ ಅನ್ನ ಹಾಕಿದ ಮನೆಗೆ ಬೆಂಕಿ ಇಟ್ಟ ಘಟನೆ ನಡೆದಿದೆ. ಸಿಸಿಟಿವಿ ಕಾರಣ ಮನೆ ಹೊತ್ತಿ ಉರಿದಿದ್ದು ಹೇಗೆ ಅನ್ನೋದು ಬಹಿರಂಗವಾಗಿದೆ. ಈ ಘಟನೆ ನಡೆದಿರುವುದು ಅಮೆರಿಕ ಟುಲ್ಸಾದಲ್ಲಿ. ಇದೀಗ ನಾಯಿಕ ಕೃತ್ಯದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಜೊತೆಗೆ ಎಚ್ಚರಿಕೆ ಸಂದೇಶ ಕೂಡ ರವಾನೆಯಾಗುತ್ತಿದೆ.
ಟುಲ್ಸಾದಲ್ಲಿನ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಮನೆಯ ಸದಸ್ಯರು ತೆರಳಿದಾಗ ಮನೆಯ ಲಿವಿಂಗ್ ರೂಂನಲ್ಲಿ ಎರಡು ಸಾಕು ನಾಯಿ ಬಿಟ್ಟಿದ್ದಾರೆ. ಈ ನಾಯಿಗಳು ಮನೆ ಒಳಗೆ ಆಟವಾಡುತ್ತಾ ಕಾಲ ಕಳೆದಿದೆ. ಇದರ ನಡುವೆ ಒಂದು ನಾಯಿ ಮನೆಯ ಮೂಲೆಯಲ್ಲಿ ಬಿದ್ದಿದ್ದ ಲಿಥಿಯಂ ಐಯಾನ್ ಬ್ಯಾಟರಿ ಹೆಕ್ಕಿ ತಂದು ಆಟವಾಡಲು ಶುರು ಮಾಡಿದೆ.
ಸಣ್ಣ ಗಾತ್ರದ ಲಿಥಿಯಂ ಐಯಾನ್ ಬ್ಯಾಟರಿಯಲ್ಲೇ ಎರಡು ನಾಯಿಗಳು ಆಟವಾಡಿದೆ. ಈ ವೇಳೆ ಬೆಡ್ ಮೇಲೆ ಕುಳಿದ ಒಂದು ನಾಯಿ ಲಿಥಿಯಂ ಐಯಾನ್ ಬ್ಯಾಟರಿಯನ್ನು ಕಚ್ಚಿದೆ. ಒಂದೇ ಸಮನೆ ಬ್ಯಾಟರಿ ಕಚ್ಚುತ್ತಿದ್ದಂತೆ ಬ್ಯಾಟರಿ ಸ್ಫೋಟಗೊಂಡಿದೆ. ಈ ವೇಳೆ ಎರಡು ನಾಯಿಗಳು ಗಾಬರಿಗೊಂಡಿದೆ. ಕೋಣೆಯೊಳಗೆ ಆತಂಕದಿಂದ ಓಡಾಡಲು ಆರಂಭಿಸಿದೆ.
ಬೆಡ್ ಮೇಲೆ ಬ್ಯಾಟರಿ ಸ್ಫೋಟಗೊಂಡ ಕಾರಣ ಒಂದೇ ಸಮನೆ ಬೆಡ್‌ಗೆ ಬೆಂಕಿ ಹೊತ್ತುಕೊಂಡಿದೆ. ನೋಡ ನೋಡುತ್ತಿದ್ದಂತೆ ಬೆಂಕಿ ಧಗಧಗಿಸಿದೆ. ಸಂಪೂರ್ಣ ಬೆಡ್ ಹೊತ್ತಿ ಉರಿದಿದೆ. ದಟ್ಟ ಹೊಗೆ ಮನೆಯಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದೆ. ಇತ್ತ ಪಕ್ಕದಲ್ಲೇ ಸೋಫಾ ಹಾಗೂ ಇತರ ವಸ್ತುಗಳಿತ್ತು. ಅದೃಷ್ಟವಶಾತ್ ಬೆಡ್‌ಗೆ ಮಾತ್ರ ಬೆಂಕಿ ಹೊತ್ತುಕೊಂಡು ಉರಿದಿದೆ.
ಮನೆಯ ಹೊರಭಾಗದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡ ಕಾರಣ ಕೆಲವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇತ್ತ ಮಾಲಕರು ಓಡೋಡಿ ಬಂದಿದ್ದಾರೆ. ಅಗ್ನಿಶಾಮಕ ದಳ ಸಹಾಯದಿಂದ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಬಳಿಕ ಸಿಸಿಟಿವಿ ಪರಿಸೀಲಿಸಿದಾಗ ನಾಯಿ ಕೃತ್ಯ ಬಯಲಾಗಿದೆ. ಇದೇ ವೇಳ ಪೊಲೀಸರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಸ್ಮಾರ್ಟ್ ಫೋನ್, ಎಲೆಕ್ಟ್ರಿಕ್ ಸೈಕಲ್ ಸೇರಿದಂತೆ ಲಿಥೀಯಂ ಐಯಾನ್ ಬ್ಯಾಟರಿ ಹಾಳಾಗಿದೆ ಎಂದು ಎಲ್ಲೆಂದರಲ್ಲಿ ಬಿಸಾಡಬೇಡಿ. ಈ ಬ್ಯಾಟರಿಗಳು ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚು ಎಂದು ಎಚ್ಚರಿಸಿದ್ದಾರೆ.