ಜೀ ಕನ್ನಡ ವಾಹಿನಿಯ ಜನಪ್ರಿಯ ಶೋಗಳಲ್ಲಿ ಒಂದಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನ ಹೊಸ ಸೀಸನ್ ಆರಂಭವಾಗಿದೆ. ಶಿವರಾಜ್ಕುಮಾರ್, ರಕ್ಷಿತಾ ಪ್ರೇಮ್, ವಿಜಯ್ ರಾಘವೇಂದ್ರ, ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ ಜಡ್ಜ್ಗಳಾಗಿರುವ, ಅನುಶ್ರೀ ನಿರೂಪಣೆ ಮಾಡುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಈ ಬಾರಿ ನಾನ್-ಡ್ಯಾನ್ಸರ್ಸ್ ಸ್ಪರ್ಧಿಗಳಿಗೆ ಚಾನ್ಸ್ ನೀಡಲಾಗಿದೆ. ಸಂಖ್ಯಾಶಾಸ್ತ್ರಜ್ಞ ಮತ್ತು ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಕೂಡ ಶೋನಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಪ್ರತಿಬಾರಿಯು ಹೊಸ ಹೊಸ ಪ್ರತಿಭೆಗಳು ಇಲ್ಲಿಗೆ ಬಂದು ತಮ್ಮ ಟ್ಯಾಲೆಂಟ್ ಪ್ರದರ್ಶನ ಮಾಡಿದ್ದಾರೆ. ಈ ಬಾರಿ ನಾನ್-ಡ್ಯಾನ್ಸರ್ಸ್ ಸೀಸನ್ ಮಾಡಲಾಗಿದೆ. ಡ್ಯಾನ್ಸ್ ಗೊತ್ತಿಲ್ಲದೇ ಇರುವವರನ್ನು ಕರೆಸಿ, ಅವರಿಂದ ಮನರಂಜನೆ ಕೊಡಿಸುವುದೇ ಈ ಸೀಸನ್ನ ಉದ್ದೇಶ. ಅಂತೆಯೇ, ಡ್ಯಾನ್ಸೇ ಗೊತ್ತಿರದ ಆರ್ಯವರ್ಧನ್ ಗುರೂಜಿ ಕೂಡ ಮಸ್ತ್ ಆಗಿ ಕುಣಿದು ಎಲ್ಲರಿಗೂ ಅಚ್ಚರಿ ನೀಡಿದ್ದಾರೆ.
ಈ ವಾರದ ಸಂಚಿಕೆಯಲ್ಲಿ ಆರ್ಯವರ್ಧನ್ ಗುರೂಜಿ ಅವರು ಸಖತ್ ಎಂಟರ್ಟೇನ್ ಮಾಡಲಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಒಂದು ಪ್ರೋಮೋವನ್ನು ಜೀ ಕನ್ನಡ ವಾಹಿನಿಯು ರಿಲೀಸ್ ಮಾಡಿದೆ. ಡ್ಯಾನ್ಸ್ ಅಖಾಡಕ್ಕೆ ಇಳಿದ ಎರಡನೇ ವಾರವೇ ಯಾರೂ ನಿರೀಕ್ಷೆ ಮಾಡಿರದಷ್ಟು ಚೆನ್ನಾಗಿ ಆರ್ಯವರ್ಧನ್ ಗುರೂಜಿ ಡ್ಯಾನ್ಸ್ ಮಾಡಿದ್ದಾರೆ ಎಂಬುದಕ್ಕೆ ಈ ಪ್ರೋಮೋ ಸಾಕ್ಷಿಯಾಗಿದೆ. ಪೂರ್ತಿ ಡ್ಯಾನ್ಸ್ ಶೋ ಈ ವಾರಾಂತ್ಯದ ಸಂಚಿಕೆಯಲ್ಲಿ ಸಿಗಲಿದೆ.
ಈ ವಾರ ಆರ್ಯವರ್ಧನ್ ಅವರು ತಮ್ಮ ಪಾರ್ಟ್ನರ್ ಸುಚಿತ್ರಾ ಜೊತೆಗೆ ವೇದಿಕೆ ಮೇಲೆ ಬಂದಿದ್ದರು. 1986ರಲ್ಲಿ ತೆರೆಕಂಡ ಡಾ ವಿಷ್ಣುವರ್ಧನ್, ಸುಮಲತಾ ಅಭಿನಯದ ‘ಕರ್ಣ’ ಸಿನಿಮಾದ ‘ಪ್ರೀತಿಯೇ ನನ್ನುಸಿರು.. ಪ್ರೀತಿಯೇ ನನ್ನುಸಿರು..’ ಹಾಡಿಗೆ ಡ್ಯಾನ್ಸ್ ಮಾಡಿದರು. ಆರ್ಯವರ್ಧನ್ ಹಾಕುತ್ತಿದ್ದ ಸ್ಟೆಪ್ಗಳನ್ನು ಕಂಡು ಶಿವರಾಜ್ಕುಮಾರ್, ರಕ್ಷಿತಾ ಸೇರಿದಂತೆ ತೀರ್ಪುಗಾರರೆಲ್ಲರೂ ಎದ್ದು ನಿಂತು ಚಪ್ಪಾಳೆ ಹೊಡೆದರು. ರಕ್ಷಿತಾ ಅವರು ವೇದಿಕೆ ಮೇಲೆ ಹೋಗಿ ಆರ್ಯವರ್ಧನ್ ಗುರೂಜಿ ಜೊತೆ ಡ್ಯಾನ್ಸ್ ಮಾಡಿದ್ದು ವಿಶೇಷ.