ಕತ್ತಲಲ್ಲಿ ಮಲೆನಾಡು;ಮೊಬೈಲ್ ಫುಲ್ ಚಾರ್ಜ್ಗೆ 60 ರೂ:ಹಾಲ್ಫ್ಗೆ 40 ರೂ
ಚಿಕ್ಕಮಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಕತ್ತಲಲ್ಲಿರುವ ಕಾಫಿನಾಡ ಮಲೆನಾಡು ಭಾಗದಲ್ಲಿ ಮಲೆನಾಡಿಗರು ಹಣ ನೀಡಿ ಮೊಬೈಲ್ ಚಾರ್ಜ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ 15 ದಿನಗಳಿಂದಲೂ ಕೂಡ ಧಾರಾಕಾರ ಮಳೆ ಹಾಗೂ ಭಾರಿ ಗಾಳಿ ಬೀಸುತ್ತಿದೆ. 3-4 ದಿನಗಳಿಂದ ಮಲೆನಾಡು ಭಾಗದಲ್ಲಿ ಒಂದಷ್ಟು ಬಿಡುವು ನೀಡಿದ್ದ ವರುಣದೇವ ಕಳೆದ ರಾತ್ರಿಯಿಂದ ಮತ್ತೆ ಅಬ್ಬರಿಸಿದ್ದಾನೆ.
ಕಳೆದ ಮೂರ್ನಾಲ್ಕು ದಿನಗಳಿಂದ ಮಲೆನಾಡು ಭಾಗದಲ್ಲಿ ಭಾರೀ ಗಾಳಿಗೆ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದು ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ. ಹಾಗಾಗಿ, ಮಲೆನಾಡ ಕೆಲ ಗ್ರಾಮಗಳು ಕತ್ತಲಲ್ಲಿ ಬದುಕುವಂತಾಗಿದೆ. ಮೂಡಿಗೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 173 ಹಾಂದಿ ಗ್ರಾಮ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಮೊಬೈಲ್ ಚಾರ್ಜ್ ಇಲ್ಲದ ಕಾರಣ ಜನ ಪರದಾಡುತ್ತಿದ್ದರು.
ಹಾಂದಿ ಸಮೀಪದ ಶಾಮಿಯಾನ ಅಂಗಡಿ ಒಂದರಲ್ಲಿ ಜನರೇಟರ್ ಆನ್ ಮಾಡಿ ಮೊಬೈಲ್ ಚಾರ್ಜ್ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಸಾರ್ವಜನಿಕರು ಅಂಗಡಿ ಮುಂದೆ ಜಮಾಯಿಸಿದ್ದರು. ಅದರಲ್ಲಿ ಕಾಲೇಜು ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಒಂದು ಮೊಬೈಲ್ ಫುಲ್ ಚಾರ್ಜ್ ಮಾಡಲು 60 ರೂ. ಹಾಗೂ ಹಾಲ್ಫ್ ಚಾರ್ಜ್ ಮಾಡಲು 40 ರೂ. ಪಡೆದುಕೊಳ್ಳುತ್ತಿದ್ದರು ಎಂದು ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಮೊಬೈಲ್ ಚಾರ್ಜ್ ಇಲ್ಲದೆ ಪರದಾಡಿದ್ದ ಸಾರ್ವಜನಿಕರು ಹಾಗೂ ಯುವಕರು ಹಣ ಕೊಟ್ಟರೂ ಪರವಾಗಿಲ್ಲ ಎಂದು ಶಾಮಿಯಾನ ಅಂಗಡಿ ಮುಂದೆ ಹಣ ಕೊಟ್ಟು ಮೊಬೈಲ್ ಚಾರ್ಜ್ ಮಾಡಿಸಿಕೊಂಡಿದ್ದಾರೆ.