ಹುಬ್ಬಳ್ಳಿ: ಪಕ್ಷದ ಶಿಸ್ತಿನ ಶಿಪಾಯಿ, ಸಂಘಟನಾ ಚತುರರಾಗಿ, ಹೋರಾಟದ ಮೂಲಕವೇ ಜಿಲ್ಲೆ ಮತ್ತು ರಾಜ್ಯ ಕಾಂಗ್ರೆಸ್ ನಾಯಕರ ಗಮನ ಸೆಳೆದಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಮೋಹನ್ ಲಿಂಬಿಕಾಯಿ ಅವರಿಗೆ ಕೆಪಿಸಿಸಿ ಉಪಾಧ್ಯಕ್ಷ ಹುದ್ದೆ ಲಭಿಸಿದೆ.
ಕಳೆದ ಹತ್ತಾರು ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಹೋರಾಟದಲ್ಲಿ ತೊಡಗಿರುವ ಪಕ್ಷದ ನಿಷ್ಟಾವಂತ ಕಾರ್ಯಕರ್ತ ಮೋಹನ್ ಲಿಂಬಿಕಾಯಿ ಹುಬ್ಬಳ್ಳಿ-ಧಾರವಾಡದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸುವುದರ ಜತೆಗೆ ಈ ಭಾಗದ ಲಿಂಗಾಯತ ಮುಖಂಡರಲ್ಲಿ ಪ್ರಮುಖರಾಗಿದ್ದಾರೆ.
ಅದರಂತೆ ಧಾರವಾಡ ಲೋಕಸಭಾ ಮತಕ್ಷೇತ್ರದ ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಇವರಿಗೆ ಕೊನೆ ಗಳಿಗೆಯಲ್ಲಿ ಟಿಕೆಟ್ ಕೈತಪ್ಪುವಂತಾಗಿದೆ.
ಈ ದಿಸೆಯಲ್ಲಿ ಪಕ್ಷದ ಹೈಕಮಾಂಡ ಮೋಹನ್ ಲಿಂಬಿಕಾಯಿ ಅವರ ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅಖಿಲ ಭಾರತ ಕಾಂಗ್ರೆಸ್ ಕಮಿಟಿಯು ಅವರಿಗೆ ಈ ಪ್ರಮುಖ ಹುದ್ದೆ ನೀಡಿರುವುದು ಧಾರವಾಡ ಜಿಲ್ಲೆಯಲ್ಲಿ ವಿಶೇಷವಾಗಿದೆ. ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.