ಹುಬ್ಬಳ್ಳಿ: ಮಹದಾಯಿ ಯೋಜನೆ ಕುರಿತು ಪರ ಮತ್ತು ವಿರೋಧ ಪ್ರತಿಕ್ರಿಯೆಗಳು ಬರುತ್ತಿವೆ. ಮಹದಾಯಿ ನ್ಯಾಯಾಧೀಕರಣ ಆದೇಶ ಈಗಾಗಲೇ ಆಗಿದೆ. ಗೆಜೆಟ್ ನೋಟಿಫಿಕೇಶನ್ ಕೂಡ ಆಗಿದೆ. ಲೋಕಸಭಾ ಚುನಾವಣೆ ಪೂರ್ವದಲ್ಲಿಯೇ ಈ ಭಾಗದ ಸಂಸದರು ಪ್ರಧಾನಿಗಳ ಮೇಲೆ ಒತ್ತಡ ತಂದು, ಯೋಜನೆ ಜಾರಿಗೆ ಮುಂದಾಗಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ರಾಜ್ಯ ಸರ್ಕಾರ ಈವರೆಗೆ ಕೇಂದ್ರಕ್ಕೆ ಸಮರ್ಪಕ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದೆ. ಕಳೆದ ಜನವರಿ 31ಕ್ಕೆ ನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಮಾಹಿತಿ ನೀಡಿರುವುದಾಗಿ ತಿಳಿಸಿದೆ. ಆದರೆ, ಗೋವಾ ಜನತೆ ಟೈಗರ್ ಕಾರಿಡಾರ್ ಬರುತ್ತದೆ ಯೋಜನೆಗೆ ಆದೇಶ ನೀಡಬಾರದು ಎಂದು ಕ್ಯಾತೆ ತೆಗೆದಿದೆ ಎಂದರು.
ಕಳಸಾದಲ್ಲಿ ಟೈಗರ್ ಕಾರಿಡಾರ ಇದೆ ಎಂದು ಕೇಂದ್ರ ಸರ್ಕಾರದವರು ಒಪ್ಪಿಗೆ ನೀಡುತ್ತಿಲ್ಲ. ಈ ಭಾಗದ ಸಂಸದರು ಚುನಾವಣಾ ಪೂರ್ವದಲ್ಲಿಯೇ ಪರಿಸರ ಇಲಾಖೆ ಪರವಾನಗಿ ಪಡೆದು ಯೋಜನೆ ಆರಂಭಿಸಲು ಪ್ರಧಾನಿ ಮೇಲೆ ಒತ್ತಡ ಹೇರಬೇಕು. ಮಿನಿ ಡ್ಯಾಂ ಕಟ್ಟುವುದನ್ನು ರಾಜ್ಯ ಸರ್ಕಾರ ಮಾಡುತ್ತದೆ. ಸರಿಯಾಗಿ ಪ್ರಸ್ತಾವನೆ ಸಲ್ಲಿಸಿಲ್ಲ ಎಂಬುದು ಕುಂಟು ನೆಪ ಹೇಳಬಾರದು ಎಂದು ಹೇಳಿದರು.
ನರೇಗಾ ಯೋಜನೆಯಡಿ 2023 ಸೆಪ್ಟೆಂಬರ್ ನಿಂದ 702 ಕೋಟಿ ಹಣ ನರೇಗಾ ಕಾರ್ಮಿಕರಿಗೆ ವೇತನ ನೀಡಿಲ್ಲ. ಇದರಿಂದಾಗಿ ಜನ ಗುಳೆ ಹೋಗುತ್ತಿದ್ದಾರೆ. ಈ ಹಣ ಬಿಡುಗಡೆಗೆ ಕೇಂದ್ರದ ನಾಯಕರು ಶ್ರಮಿಸಬೇಕು ಎಂದರು.
ಕಳೆದ ಎರಡು ತಿಂಗಳುಗಳಿಂದ ದೆಹಲಿಯಲ್ಲಿ ರೈತರು ತಮ್ಮ ಬೇಡಿಕೆಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ. ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಿ ಬೆಳೆಗೆ ಬೆಂಬಲ ಬೆಲೆ ನೀಡಬೇಕು, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಸಹಾಯ ಕಲ್ಪಿಸಬೇಕು. ನರೇಗಾ ಅಡಿ ನೂರು ದಿನಗಳ ಬದಲು 200 ದಿನ ಕೆಲಸ ನೀಡಲು ಆಗ್ರಹಿಸುತ್ತಿದ್ದಾರೆ. ಎಂ.ಎಸ್. ಸ್ವಾಮಿನಾಥನ್ ವರದಿ ಯಥಾವತ್ತಾಗಿ ಜಾರಿ ಮಾಡಬೇಕು. ನೀರಾವರಿಯನ್ನು ಆರ್ಥಿಕವಾಗಿ ಬಳಸಿಕೊಳ್ಳಲು ವಾಟರ್ ಎಕಾನಮಿ ಜಾರಿಗೆ ತರಬೇಕು ಎಂದು ತಿಳಿಸಿದರು.
ಲೋಕಸಭಾ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಧಾರವಾಡ ಲೋಕಸಭೆ ಕ್ಷೇತ್ರಕ್ಕೆ ಟಿಕೆಟ್ ಕೇಳಿದ್ದೇನೆ. ನಾಯಕರು ಸಮ್ಮತಿ ಸೂಚಿಸಿದ್ದಾರೆ. ಟಿಕೆಟ್ ದೊರೆತರೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತೇನೆ. ಟಿಕೆಟ್ ದೊರೆಯುವ ಭರವಸೆ ಇದೆ. ಎಲ್ಲ ಸಮಾಜದವರು ನನಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಂಗಾರೇಶ ಹಿರೇಮಠ, ರಾಜಶೇಖರ ಮೆಣಸಿನಕಾಯಿ, ಬಾಪುಗೌಡ ಪಾಟೀಲ, ಅನ್ವರ ಮುಧೋಳ, ಪ್ರಕಾಶ ಪಾಟೀಲ ಇದ್ದರು.