ಹುಬ್ಬಳ್ಳಿ:ಸಾರಿಗೆ ನೌಕರರ ನ್ಯಾಯಯುತವಾದ ಬೇಡಿಕೆಗಳನ್ನು ತುರ್ತಾಗಿ ಈಡೇರಿಸಬೇಕು. ಇಲ್ಲದಿದ್ದರೆ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ವತಿಯಿಂದ ಕುಟುಂಬ ಸಮೇತ ಮಾ. ೪ ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುವ ಸಾರಿಗೆ ನೌಕರರ ಆಹೋರಾತ್ರಿ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಸ್.ಸಿ.ಎಸ್.ಟಿ ಕ್ಷೇಮಾಭಿವೃದ್ಧಿ ಸಂಘದ ವಾಯವ್ಯ ವಿಭಾಗದ ಅಧ್ಯಕ್ಷರಾದ ಡಿ.ಪ್ರಸಾದ್ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮುಷ್ಕರದಲ್ಲಿ ಕಾರ್ಮಿಕರ ವಿರುದ್ಧವಾಗಿ ಕೈಗೊಂಡ ಎಲ್ಲಾ ಶಿಸ್ತಿನ ಕ್ರಮ, ಡಿಸ್ಮಿಸಲ್ಸ್ ಮತ್ತು ಪೊಲೀಸ್ ಎಫ್.ಐ.ಆರ್ ಪ್ರಕರಣಗಳನ್ನು ರದ್ದುಮಾಡಿ, ಅವರುಗಳನ್ನು ಮುಷ್ಕರದ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸುವುದು, ೧/೧/೨೦೨೦ ರಿಂದ ಅನ್ವಯವಾಗುವಂತೆ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿಗಳ ಒಂದೇ ಕಂತಿನಲ್ಲಿ ವೇತನದ ಹಿಂಬಾಕಿಯನ್ನು ಪಾವತಿಸುವುದು.
ಮುಖ್ಯವಾಗಿ ೨೦೨೦ ರಿಂದ ನಿವೃತ್ತಿಯಾದ ನೌಕರರಿಗೆ ೧/೧/೨೦೨೦ ರಿಂದ ವೇತನ ವಿಮರ್ಶೆ ಮಾಡಿ ಬಾಕಿ ಹಣವನ್ನು ಮತ್ತು ಹಿಂಬಾಕಿ ಮೊತ್ತವನ್ನು ಕೂಡಲೇ ಪಾವತಿಸುವುದು, ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ಮತ್ತು ಸೌಲಭ್ಯಗಳನ್ನು ಸಾರಿಗೆ ನೌಕರರಿಗೂ ಸಹ ವಿಸ್ತರಿಸಬೇಕು, ಸಾರಿಗೆ ನೌಕರರಿಗೆ ಮತ್ತು ಅವಲಂಬಿತರಿಗೆ ಉಚಿತ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರುವುದು ಸೇರಿದಂತೆ ಮೊದಲಾದ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.
ಸತ್ಯಾಗ್ರಹದಲ್ಲಿ ಸಾರಿಗೆ ನೌಕರರು ಮತ್ತು ಅವರ ಕುಟುಂಬ ಸದಸ್ಯರು, ಸರ್ಕಾರಿ ನೌಕರರು, ನಿವೃತ್ತ ನೌಕರರು ಭಾಗಿಯಾಗಬೇಕೆಂದು ಅವರು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಶೈಲ್ ಗೌಡ ಕಮತರ,ಎಲ್.ಮನಮೋಹನ್, ಎ.ಎಸ್.ಶಿಂಧೆ ಉಪಸ್ಥಿತರಿದ್ದರು.