ಹುಬ್ಬಳ್ಳಿ:. ರಾಜ್ಯ ಸರ್ಕಾರಕ್ಕೆ ಹಿಂದುಳಿದ ಆಯೋಗ ಸಲ್ಲಿಸಿರುವ ವರದಿ ಜಾತಿ ಗಣತಿಯೊ ಅಥವಾ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಿಂದುಳಿದ ವರ್ಗದವರ ಜಾತಿಗಣತಿಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ವರದಿ ಅವೈಜ್ಞಾನಿಕವಾಗಿದ್ದು ಸಿದ್ದರಾಮಯ್ಯ ಅವರ ಸರ್ಕಾರ ಸ್ವೀಕಾರ ಮಾಡಬಾರದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಧಾರವಾಡ ಜಿಲ್ಲಾಧ್ಯಕ್ಷರಾದ ಗುರುರಾಜ್ ಹುಣಸಿಮರದ ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಗ್ರ ವರದಿಯನ್ನು ಮರುಪರಿಶೀಲನೆ ಮಾಡಿ ಮುಂದಿನ ನಡೆ ಇಡಬೇಕು ಎಂದರು. ಈಗ ಪಡೆದಿರುವ ವರದಿಯನ್ನು ಸರಿಯಾಗಿ ಮಾಡಿಲ್ಲ. ಎಲ್ಲಿಯೋ ಕುಳಿತು ಮಾಡಲಾಗಿದೆ. ಹೀಗಾಗಿ ಇದು ಸಂಪೂರ್ಣ ಅವೈಜ್ಞಾನಿಕ ವರದಿಯಾಗಿದ್ದು, ಇದನ್ನು ಕೈಬಿಡಬೇಕು.
ವರದಿಯ ಕುರಿತು ಮಹಾಸಭಾ ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದೆ. ಸರಿಯಾದ ರೀತಿಯಲ್ಲಿ ಜಾತಿ ಜನಗಣತಿ ಮಾಡುವುದಾದರೇ ನಮ್ಮ ಅಭ್ಯಂತ್ರವಿಲ್ಲ. ಅದರಲ್ಲಿ ಉದ್ದೇಶಪೂರ್ವಕವಾಗಿ ವೀರಶೈವ ಲಿಂಗಾಯತರು ಕಡಿಮೆ ಇದ್ದಾರೆ. ಎಂಬುದನ್ನು ತೋರಿಸುವ ಕೆಲಸವಾಗುತ್ತಿದೆ. ರಾಜ್ಯದಲ್ಲಿ ಒಟ್ಟು ೬೫ ಲಕ್ಷ ಜನಾ ವೀರಶೈವ ಲಿಂಗಾಯತರು ಇದ್ದಾರೆಂದು ತೋರಿಸಿದ್ದಾರೆ.
ಈ ಹಿಂದೆಯೇ ಚಿನ್ನಪ್ಪ ರೆಡ್ಡಿ ಅವರ ವರದಿಯಲ್ಲಿ ೮೦ ಲಕ್ಷ ವೀರಶೈವ ಲಿಂಗಾಯತರು ಇರುವುದು ಬಹಿರಂಗವಾಗಿತ್ತು. ಈಗಿನ ವರದಿಯಲ್ಲಿ ೧೩ ನೂರು ಜಾತಿಯನ್ನು ವಿಂಗಡಿಸಿ, ಅರ್ಧಕ್ಕಿಂತ ಹೆಚ್ಚಿನ ನಮ್ಮ ಸಮಾಜದವರನ್ನು ಹಿಂದುಳಿದ ವರ್ಗಕ್ಕೆ ಸೇರ್ಪಡೆಮಾಡಲಾಗಿದೆ.
ಜಾತಿಗಣತಿ ವರದಿಯಾಗಿದ್ದರೆ ಲಿಂಗಾಯತರನ್ನು ಹಿಂದುಳಿದ ವರ್ಗಕ್ಕೆ ಏಕೆ ಸೇರ್ಪಡೆ ಮಾಡಲಾಗಿದೆ. ಆದ್ದರಿಂದ ಇದೊಂದು ಸುಳ್ಳು ವರದಿಯಾಗಿದ್ದು, ವೈಜ್ಞಾನಿಕವಾಗಿಲ್ಲ. ಮರು ಪರಿಶೀಲನೆ ಮಾಡಬೇಕು. ಸರ್ಕಾರ ಸಮಗ್ರ ವರದಿ ತರಿಸಿಕೊಂಡು ನಂತರ ಬಿಡುಗಡೆ ಮಾಡಬೇಕು.
ಒಂದು ವೇಳೆ ಈ ವರದಿಯನ್ನು ಸ್ವೀಕರಿಸಿ ಬಿಡುಗಡೆಗೊಳಿಸಿದರೇ ವೀರಶೈವ ಲಿಂಗಾಯತರು ರಾಷ್ಟ್ರ, ರಾಜ್ಯ ಹಾಗೂ ಗ್ರಾಮೀಣ ಮಟ್ಟದಿಂದಲ್ಲೂ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.
ಸುದ್ದಿಗೋಷ್ಠಿಯಲ್ಲಿ ದೇವರಾಜ್ ದಾಡಿಬಾವಿ, ಶಶಿಶೇಖರ್ ಡಂಗಣವರ, ಅಜೇಯ್ ಹಿರೇಮಠ, ರವಿ ಭಟ್, ಮಂಜುನಾಥ ಹೆಬಸೂರ ಉಪಸ್ಥಿತರಿದ್ದರು.