ಪ್ರಸಕ್ತ ಸಾಲಿನ ಮೂರನೇಯ ವಿಧಾನಸಭೆಯ ಅಧಿವೇಶನದಲ್ಲಿ ಕುಂದಗೋಳ ಮತಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಸದನದಲ್ಲಿ ಬೆಣ್ಣಿಹಳ್ಳಕ್ಕೆ ತಡೆಗೋಡೆ ಹಾಗೂ ಹೂಳು ತೆಗೆಯುವುದು, ಮೇವು ಬ್ಯಾಂಕ್ ಸ್ಥಾಪನೆ, ಬರಗಾಲ ಕಾಮಗಾರಿ, ವಿದ್ಯಾನಿಧಿ ಯೋಜನೆ ಹಾಗೂ ಆಶ್ರಯ ಮನೆಗಳ ಕುರಿತಾಗಿ ಸನ್ಮಾನ್ಯ ಶಾಸಕರಾದ ಶ್ರೀ ಎಂ. ಆರ್. ಪಾಟೀಲ ರವರು ಸದನದಲ್ಲಿ ಚರ್ಚಿಸಿದರು.
ಬೆಣ್ಣಿಹಳ್ಳಕ್ಕೆ ತಡೆಗೋಡೆ ಹಾಗೂ ಹೂಳು ತೆಗೆಯುವುದು.
ಕುಂದಗೋಳ, ಹುಬ್ಬಳ್ಳಿ ಗ್ರಾಮೀಣ ಹಾಗೂ ನವಲಗುಂದ ಭಾಗದ ರೈತರ ಬೆನ್ನೆಲುಬು ಮುರಿಯುವ ಬೆಣ್ಣಿಹಳ್ಳವು ಸುಮಾರು 148 ಕಿ.ಮೀ ಹರಿಯುತ್ತಿದ್ದು, ನನ್ನ ಕ್ಷೇತ್ರದಲ್ಲಿ 42 ಕಿ.ಮೀ ಉದ್ದ ಹರಿದು ಪ್ರತಿವರ್ಷ ಮಳೆಗಾಲದಲ್ಲಿ ಅಪಾರ ಹಾನಿಯನ್ನುಂಟು ಮಾಡುತ್ತದೆ. ಆಯವ್ಯಯದಲ್ಲಿ ಸೂಚಿಸಿದಂತೆ ಬೆಣ್ಣಿಹಳ್ಳಕ್ಕೆ ತಡೆಗೋಡೆ ನಿರ್ಮಾಣ ಅಂತಾ ತಿಳಿಸಿದ್ದು, ಆದರೇ ಇದಕ್ಕಾಗಿ ನಿರ್ಧಿಷ್ಟವಾದ ಅನುದಾನವನ್ನು ಮೀಸಲಿಟ್ಟಿರುವುದಿಲ್ಲ. ಈ ಸಮಸ್ಯೆ ಸುಮಾರು ವರ್ಷಗಳಿಂದಲೂ ಹೀಗೆ ಇದ್ದು, ಕುಂದಗೋಳ ಕ್ಷೇತ್ರದ 22 ಹಳ್ಳಿಗಳಲ್ಲಿ ಈ ಬೆಣ್ಣಿಹಳ್ಳವು ತನ್ನ ವಿಸ್ತಾರವನ್ನು ಹೊಂದಿದ್ದು, ಪ್ರತಿ ವರ್ಷ ಸಾವಿರಾರು ಎಕರೆ ಬೆಳೆಯು ಬಿಣ್ಣಿಹಳ್ಳದಿಂದ ಹಾಗೂ ಇದರ ಉಪಹಳ್ಳಗಳಾದ ಕಗ್ಗೋಡಿ, ಮಾಸ್ತಿ, ದೇಸಾಯಿ, ಡವಗಿ ಹಾಗೂ ಗೂಗಿ ಹಳ್ಳಗಳಿಂದ ಆಗುತ್ತದೆ. ಹಾಗಾಗಿ ಸದರ ಬೆಣ್ಣಿಹಳ್ಳಕ್ಕೆ ಕೇವಲ ತಡೆಗೋಡೆಯಷ್ಟೇ ಅಲ್ಲ ಇದರ ಹಾಗೂ ಇದರ ಉಪಹಳ್ಳಗಳ ಹೂಳು ತೆಗೆಯುವ ಕೆಲಸ ಆಗಬೇಕು ಅಂತಾ ಸರಕಾರದ ಗಮನ ಸೆಳೆದು ಒತ್ತಾಯಿಸಿದರು.
ಮೇವು ಬ್ಯಾಂಕ್ ಹಾಗೂ ಬರ ಪರಿಹಾರ ಹೆಚ್ಚಳ
ಕುಂದಗೋಳ ಕ್ಷೇತ್ರವು ತೀವೃ ಬರಪೀಡಿತ ತಾಲೂಕು ಅಂತಾ ಘೋಷಣೆ ಆಗಿದ್ದು, ಟಾಸ್ಕ್ಫೋರ್ಸ ಸಮಿತಿಯಲ್ಲಿ ಮೇವು ಖರೀದಿಸಲು ರೈತರು ಖರ್ಚು ಮಾಡಲು ತಿಳಿಸಿರುವ ರೂ 2000 ಅನ್ನು ಸರಕಾರವು ಉಚಿತವಾಗಿ ನೀಡಬೇಕು. ಅಷ್ಟೇ ಅಲ್ಲದೇ ಗ್ರಾಮೀಣ ಭಾಗದ ಪ್ರತಿ ಕುಟುಂಬಗಳಲ್ಲಿ 8 ರಿಂದ 10 ಟನ್ ಮೇವು ಅವಶ್ಯವಿದ್ದು ಸದರ ಮೇವು ಅನ್ನು ಉಚಿತವಾಗಿ ನೀಡಬೇಕು. ಸಧ್ಯ ಸರಕಾರವು ಬರ ಪರಿಹಾರ ಅಂತಾ ಪ್ರತಿ ಖಾತೆದಾರನಿಗೆ ರೂ 2000 ಮಾತ್ರ ನೀಡುತ್ತಿದ್ದು, ಇದು ಕನಿಷ್ಠ ರೂ 25,000 ಆದರೂ ನೀಡಬೇಕು. ಬರಪೀಡಿತ ತಾಲೂಕುಗಳಿಗೆ ತುರ್ತು ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲು 25 ಲಕ್ಷ ಹಂಚಿಕೆ ಮಾಡಿದ್ದು, ಇದು ೦ಏತಕ್ಕೂ ಸಾಲಗಾಗಿದೆ. ಕಾರಣ ಜಿಲ್ಲಾಡಳಿತವು ನೀಡಿದ ವರದಿಯನ್ವಯ ನಮ್ಮ ತಾಲೂಕಿಗೆ ಕನಿಷ್ಠ 50 ಕೋಟಿ ಅನುದಾನನ್ನು ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿದರು.
ಬರಗಾಲ ಕಾಮಗಾರಿ ಮತ್ತು ಜನರಿಗೆ ಉದ್ಯೋಗ ಕಲ್ಪಿಸುವುದು.
ಕುಂದಗೋಳ ಕ್ಷೇತ್ರವು ಪ್ರತಿಶತ 70% ರಷ್ಟು ಕಪ್ಪು ಮಣ್ಣಿನ ಯರಿ ಭೂಮಿಯಿಂದಾವೃತವಾಗಿರುವುದರಿಂದ ಇಲ್ಲಿರುವ ಕೆರೆಗಳ ನೀರು ಬರಗಾಲವಿರುವುದರಿಂದ ಬತ್ತಿ ಹೋಗಿದೆ. ಹಾಗಾಗಿ ಬರಪೀಡಿತ ತಾಲೂಕಿರುವುದರಿಂದ ಹೆಚ್ಚಿನ ಅನುದಾನವನ್ನು ನೀಡಬೇಕು ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರು ಇತ್ತ ಗಮನ ಹರಿಸಬೇಕೆಂದು ಹಾಗೂ ಈ ಭಾಗದ ಜನರು ಕೆಲಸಕ್ಕಾಗಿ ಬೇರೆ ಕಡೆಗೆ ಗೂಳೆ ಹೋಗುವುದನ್ನು ತಪ್ಪಿಸಲು ರಸ್ತೆ ಕಾಮಗಾರಿ, ಬರಗಾಲ ಕಾಮಗಾರಿಗಳನ್ನು ಕೈಗೊಳ್ಳಲು ಅದಕ್ಕಾಗಿ ಹೆಚ್ಚಿನ ಅನುದಾನವನ್ನು ನೀಡಬೇಕೆಂದು ಆಗ್ರಹಿಸಿದರು.
ಆಶ್ರಯ ಯೋಜನೆ ಹಾಗೂ ವಿದ್ಯಾನಿಧಿ ಯೋಜನೆ
ಗ್ರಾಮೀಣ ಭಾಗದ ಪ್ರತಿ ಬಡ ಜನರ ಆಶಾ ಕಿರಣವಾಗಿ ಪರಿಣಮಿಸುವ ಆಶ್ರಯ ಯೋಜನೆಯಡಿ ಬಡವರಿಗೆ ಸೂರು ಕಲ್ಪಿಸಿ ಸಹಾಯ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸರಕಾರ ತ್ವರಿತವಾಗಿ ಅನುದಾನ ನೀಡಬೇಕು ಹಾಗೂ ಪ್ರತಿ ವಿದ್ಯಾರ್ಥಿಗಳಿಗಳಿಗೂ ವಿದ್ಯಾನಿಧಿ ಯೋಜನೆಯ ಸೌಲಭ್ಯ ನೀಡುವಂತೆ ಯೋಜನೆಯನ್ನು ವಿಸ್ತರಿಸಬೇಕು ಅಂತಾ ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.