Beer Prices Hiked Again : ಮದ್ಯಪ್ರಿಯರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಕಳೆದ ಹದಿನೇಳು ತಿಂಗಳಲ್ಲಿ ಐದನೇ ಬಾರಿಗೆ ಮದ್ಯದ ದರದಲ್ಲಿ ಏರಿಕೆಯಾಗಿದೆ. ಬಿಯರ್ ಪ್ರಿಯರು ಇನ್ನು ಮುಂದೆ ಬಾಟಲ್ ವೊಂದಕ್ಕೆ ಕನಿಷ್ಠ ಐದರಿಂದ ಗರಿಷ್ಠ ಇಪ್ಪತ್ತು ರೂಪಾಯಿವರೆಗೆ ಹೆಚ್ಚು ಪಾವತಿಸಬೇಕಿದೆ.
- ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದನೇ ಬಾರಿಗೆ ಮದ್ಯದ ಬೆಲೆ ಏರಿಕೆ
- ಬಿಯರ್ ಬಾಟಲ್ ವೊಂದಕ್ಕೆ ಐದರಿಂದ ಇಪ್ಪತ್ತು ರೂಪಾಯಿವರೆಗೆ ಏರಿಕೆ
- ಗ್ಯಾರಂಟಿ ಯೋಜನೆಗಳಿಂದ ಸತತವಾಗಿ ಜನಸಾಮಾನ್ಯರ ಜೇಬುಗೆ ಕತ್ತರಿ
ಬಿಯರ್ ಬೆಲೆ ಬಾಟಲ್ ವೊಂದಕ್ಕೆ (ಆಯಾಯ ಬ್ರ್ಯಾಂಡ್ ಆಧರಿಸಿ) ಐದರಿಂದ ಇಪ್ಪತ್ತು ರೂಪಾಯಿವರೆಗೆ ಏರಿಕೆಯಾಗಿದೆ. ಕೆಲವೊಂದು ಕಡೆ, ಕಳೆದ ವಾರದಿಂದಲೇ ಪರಿಷ್ಕೃತ ದರವನ್ನು ಗ್ರಾಹಕರಿಂದ ತೆಗೆದುಕೊಳ್ಳಲಾಗಿದೆ. ಹೊಸ ದರ ಜುಲೈ 30 ಅಥವಾ 31ರಿಂದ ಜಾರಿಗೆ ಬರಬಹುದು.
ವಾಣಿಜ್ಯ ವಾಹನಗಳ ಮೇಲೆ ಸೆಸ್ ಹೆಚ್ಚಳ, ಸ್ಟ್ಯಾಂಪ್ ಡ್ಯೂಟಿಯಲ್ಲಿ ಭಾರೀ ಏರಿಕೆ, ಮದ್ಯದ ಮೇಲೆ ಸುಂಕ ಹೆಚ್ಚಳ, ಬಿತ್ತನೆ ಬೀಜಗಳ ಬೆಲೆ ಏರಿಕೆ, ಇಂಧನದ ಮೇಲೆ ಸೆಸ್.. ಈ ರೀತಿಯ ಏರಿಕೆಯನ್ನು ಹಾಲೀ ಸರ್ಕಾರ ಮಾಡುತ್ತಲೇ ಬರುತ್ತಿದೆ.
ಕೆಲವು ದಿನಗಳ ಹಿಂದೆ, ಮುಖ್ಯಮಂತ್ರಿಗಳು ಅಬಕಾರೀ ಇಲಾಖೆಯ ಸಭೆಯನ್ನು ಕರೆದಿದ್ದರು. ಮದ್ಯದ ಮಾರಾಟ ಹೆಚ್ಚಿಸಲು, ಹೆಚ್ಚುವರಿ ಅಬಕಾರಿ ಸುಂಕದಲ್ಲಿ ಇಳಿಕೆ ಮಾಡಿ, ಆದಾಯ ಹೆಚ್ಚಿಸಿಕೊಳ್ಳಲು ಸರ್ಕಾರ ನಿರ್ಧರಿಸುವ ಸಾಧ್ಯತೆಯಿತ್ತು. ಆದರೆ, ಉತ್ಪಾದನಾ ವೆಚ್ಚದ ಮಾಹಿತಿಯನ್ನು ಸರ್ಕಾರಕ್ಕೆ ನೀಡಲು ಕಂಪೆನಿಗಳು ತೀವ್ರ ವಿರೋಧವನ್ನು ವ್ಯಕ್ತ ಪಡಿಸಿದ್ದವು. ಹಾಗಾಗಿ, ಪ್ರೀಮಿಯಂ ಮದ್ಯಗಳ ಬೆಲೆಯಲ್ಲಿ ಇಳಿಕೆಯಾಗಿರಲಿಲ್ಲ.