Saturday, December 21, 2024
spot_img
Homeನ್ಯೂಸ್ಬಂದಿತ್ತೊಂದು ಕರೆ, ಬದಲಾಯ್ತು ದಿಕ್ಕು.. ಇದು ಸಿನಿಮಾ ಪತ್ರಕರ್ತನ ಮಗಳು ‘ಅಪರ್ಣಾ’ಳ ಜೀವನಗಾಥೆ

ಬಂದಿತ್ತೊಂದು ಕರೆ, ಬದಲಾಯ್ತು ದಿಕ್ಕು.. ಇದು ಸಿನಿಮಾ ಪತ್ರಕರ್ತನ ಮಗಳು ‘ಅಪರ್ಣಾ’ಳ ಜೀವನಗಾಥೆ

•ಪಿಯುಸಿ ವೇಳೆಗೆ ಪುಟ್ಟಣ್ಣ ಕಣಗಾಲ್ ಸಿನಿಮಾದಲ್ಲಿ ನಟಿಸುವ ಅವಕಾಶ

•ಮೊದಲ ನಿರೂಪಣೆ ಇಂಗ್ಲಿಷನ್​ನಲ್ಲಿ ಮಾಡಿದ್ದ ಅಪರ್ಣಾ ವಸ್ತಾರೆ

•ರಾಜಕೀಯ ಪ್ರಚಾರ ಕಾರ್ಯಕ್ರಮದಿಂದ ದೂರ ಈ ಒನ್​ ಆ್ಯಂಡ್​​ ಓನ್​ ವರಲಕ್ಷ್ಮೀ

ಕನ್ನಡ ಸ್ಪಷ್ಟವಾಗಿ ಮಾತನಾಡುವ ಮತ್ತು ಸಾಹಿತ್ಯವನ್ನು ಬೆರೆಸಿಕೊಂಡು ನಿರೂಪಣೆ ಮಾಡುವ, ಅದರಲ್ಲೂ ನಟನೆಯ ಮೂಲಕ ಅನೇಕರ ಮನಗೆದ್ದಿದ್ದ ಪ್ರತಿಭಾವಂತೆ ಅಪರ್ಣಾ ವಸ್ತಾರೆ ನಿನ್ನೆ ವಿಧಿವಶರಾಗಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

57 ವರ್ಷದ ಅಪರ್ಣಾ ಸಾವು ಕನ್ನಡಿಗರಿಗೆ ಬೇಸರ ತರಿಸಿಸಿದೆ. ಜೀವನದ ಹಲವು ಮಜಲುಗಳನ್ನು ದಾಟುತ್ತಾ ಕನ್ನಡವೇ ನನ್ನ ಉಸಿರು ಎಂದುಕೊಂಡು ಬಂದಿದ್ದ ಅಪರ್ಣಾ ಅವರ ಬಾಲ್ಯದ ಕಾಲ ಹೇಗಿತ್ತು? ಎಂಬುದನ್ನು ತಿಳಿಯೋಣ.

ಅಪರ್ಣಾ ವಸ್ತಾರೆ ಮೂಲತಃ ಚಿಕ್ಕಮಗಳೂರಿನವರು. ಆದರೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ಅವರು ಹೆಚ್ಚಾಗಿ ಬಾಲ್ಯವನ್ನು ಕಳೆದರು. ಕುಮಾರಪಾರ್ಕ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು ಎಂಇಎಸ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದರು.

ಪಿಯುಸಿ ವೇಳೆಗೆ ಬಂತು ಸಿನಿಮಾ ಅವಕಾಶ

ಅಪರ್ಣಾ ಅವರು ಪಿಯುಸಿ ವೇಳೆಗಾಗಲೇ ಸಿನಿಮಾ ಅವಕಾಶ ಕೈಬೀಸಿ ಕರೆಯಿತು. ಅದಕ್ಕೆ ಅವರ ತಂದೆ ಅಡಿಪಾಯ ಹಾಕಿಕೊಟ್ಟಿದ್ದರು. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್​ ಬಳಿ ಮಗಳಿಗೊಂದು ಅವಕಾಶಕ್ಕಾಗಿ ಬೇಡಿಕೆಯಿಟ್ಟರು. ತಂದೆಯ ಬೇಡಿಕೆಯಂತೆ ಖ್ಯಾತ ನಿರ್ದೇಶಕನ ನಿರ್ದೇಶನದ ಅಡಿಯಲ್ಲಿ ‘ಮಸಣದ ಹೂವು’ ಸಿನಿಮಾದಲ್ಲಿ ಅಪರ್ಣಾ ಅವರಿಗೆ ನಟಿಸುವ ಅವಕಾಶ ಬಂತು.

ಅಪರ್ಣಾ ತಂದೆ ಸಿನಿಮಾ ಪತ್ರಕರ್ತ

ಅಪರ್ಣಾ ತಂದೆ ಹೆಸರು ಕೆ.ಎಸ್ ನಾರಾಯಣಸ್ವಾಮಿ. ಅವರು ಸಿನಿಮಾ ಪತ್ರಕರ್ತರಾಗಿದ್ದರು. ಅಂದಹಾಗೆಯೇ ಅಪರ್ಣಾ ಅವರು ಸಂಪ್ರದಾಯಸ್ತ ಕುಟುಂಬದಲ್ಲಿ ಹುಟ್ಟಿಬಂದವರು, ಕನ್ನಡ, ಸಾಗಿತ್ಯ, ಓದು ಇವೆಲ್ಲವು ಅವರ ನೆಚ್ಚಿನ ವಿಷಯವಾಗಿತ್ತು.

 

 

‘ಮಸಣದ ಹೂವು’ ಮೂಲಕ  ಸಿನಿಮಾಗೆ ಎಂಟ್ರಿ

‘ಮಸಣದ ಹೂವು’ ಸಿನಿಮಾದಲ್ಲಿ ನಟಿಸಿದ ಬಳಿಕ ಅರ್ಪಣಾ ಅವರಿಗೆ ಸಿನಿಮಾ ರಂಗ ಹೆಚ್ಚು ಆಕರ್ಷಿಸಿತು. ಆದರೆ ತಮಗೆ ಬೇಕಾದ ಮತ್ತು ಇಷ್ಟವಾದ ಪಾತ್ರ ಸಿಗದೆ ಇದ್ದರೂ, ಅತ್ತ ತಮಿಳು, ತೆಲುಗು ಸಿನಿಮಾ ರಂಗ ಕೈ ಬೀಸಿ ಕರೆದರೂ ಅಪರ್ಣಾ ಕನ್ನಡ ಬಿಟ್ಟು ಎಲ್ಲೂ ಹೋಗಲ್ಲ ಎಂಬ ದೃಢ ನಿರ್ಧಾರ ಮಾಡಿದ್ದರು. ಹೀಗಾಗಿ ಬೆಂಗಳೂರನ್ನು ಬಿಟ್ಟು ಎಲ್ಲೂ ಹೋಗದೆ ಸುಮ್ಮನಿದ್ದರು. ಹೀಗಿರುವಾಗ ಅವರ ದಿಕ್ಕು ಬದಲಾಯಿಸಿದ್ದೇ ಅದೊಂದು ಕರೆ!.

ಬಂತೊಂದು ಕರೆ ..ಬದಲಾಯ್ತು ದಿಕ್ಕು

ಅಪರ್ಣಾ ಅವರಿಗೆ ದೂರದರ್ಶನ ದಿಂದ ಕರೆ ಬಂದದ್ದು ಅವರ ಬಾಳಿನ ಮತ್ತೊಂದು ಬಾಳ ತಿರುವು. ಆ ಒಂದು ತಿರುವು ಅವರ ಜೀವನವನ್ನೇ ಬದಲಾಯಿಸಿತು. ಮೈಲಿಗಲ್ಲು ಸೃಷ್ಟಿಸಿತು. ಖ್ಯಾತಿ ಪಡೆಯಲು ಮತ್ತಷ್ಟು ಸಹಾಯ ಮಾಡಿತು.

ಇದನ್ನೂ ಓದಿ: ಪುಟ್ಟಣ ಕಣಗಾಲ್ ಮೂಲಕ ಸಿನಿಮಾಗೆ ಎಂಟ್ರಿ.. ಹಿರಿತೆರೆ, ಕಿರುತೆರೆ, ನಿರೂಪಣೆ ಎಲ್ಲದರಲ್ಲೂ ಅಪರ್ಣಾ ಸೈ

ದೂರದರ್ಶನ ಆಡಿಷನ್‌ಗೆ ಹಾಜರಾಗಿ ಆಯ್ಕೆಯಾದ ಅಪರ್ಣಾರವರು ಬಳಿಕ ಆ ವೃತ್ತಿಯನ್ನು ಬಹಳಷ್ಟು ಹಚ್ಚಿಕೊಂಡರು. ಸಂದರ್ಶನ, ನೇರಪ್ರಸಾರ, ಆರೋಗ್ಯ ಕಾರ್ಯಕ್ರಮ, ರೆಕಾರ್ಡ್, ವಾರ್ತೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಗೂ ನಿರೂಪಣೆ ಮಾಡುತ್ತಿದ್ದರು. ಅಷ್ಟು ಮಾತ್ರವಲ್ಲ, ಹಿನ್ನೆಲೆ ಧ್ವನಿ ಕೊಡುತ್ತಿದ್ದರು.

ಮೊದಲ ನಿರೂಪಣೆ ಇಂಗ್ಲೀಷ್​ನಲ್ಲಿ

ಇಂಥಾ ಸಮಯದಲ್ಲಿ ಜೀವರಾಜ ಆಳ್ವ ಎಂಬವವರು ಅಪರ್ಣಾ ಅವರ ತಂದೆಗೆ ಕರೆ ಮಾಡಿ ವೇದಿಕೆ ಕಾರ್ಯಕ್ರಮವೊಂದಕ್ಕೆ ಇಂಗ್ಲಿಷ್‌ನಲ್ಲಿ ನಿರೂಪಣೆಗೆ ಮಾಡಲು ಅವಕಾಶ ನೀಡಿದರು. ಸ್ಕ್ರಿಪ್ಟ್ ಕೊಟ್ಟು ನಿರೂಪಣೆ ಮಾಡಲು ಹೇಳಿದರು.

ಇದನ್ನೂ ಓದಿ: ಮರೆಯಾದ ಮಾಧುರ್ಯ ಕಂಠದ ಕನ್ನಡತಿ.. ಖ್ಯಾತ ನಿರೂಪಕಿ ಅಪರ್ಣಾ ಇನ್ನೂ ನೆನಪು ಮಾತ್ರ!

ಅಪರ್ಣಾ ಅವರು ಮೊದಲ ಬಾರಿಗೆ ಬೆಂಗಳೂರಿನ ಆಶೋಕ ಹೊಟೇಲ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕಾರ್ಯಕ್ರಮ ನಿರೂಪಿಸುವ ಅವಕಾಶ ಸಿಕ್ಕಿತು. ಇಂಗ್ಲಿಷ್‌ನಲ್ಲಿ ನಿರೂಪಣೆ ಅವರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿತು. ಅಚ್ಚರಿ ಸಂಗತಿ ಎಂದರೆ ಏಳು ಸಾವಿರಕ್ಕೂ ಅಧಿಕ ವೇದಿಕೆ ಕಾರ್ಯಕ್ರಮಗಳನ್ನು ನಿರೂಪಿಸಿದ ಕೀರ್ತಿ ಅವರಿಗಿದೆ.

ಬದುಕಿನ ದಾರಿ ತೋರಿಸಿದ ಅಪ್ಪ ಕಣ್ಣು ಮುಚ್ಚಿದ್ರು

ವೃತ್ತಿಯಲ್ಲಿ ಬ್ಯುಸಿಯಾದ ಮತ್ತು ಇಂಥಾ ಅಚ್ಚ ಕನ್ನಡದಲ್ಲಿ ಸ್ಪಷ್ಟವಾಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಅಪರ್ಣಾಗೆ ಒಂದು ದಿನ ಶಾಕ್​ ಎದುರಾಯ್ತು. ಅದು ಬದುಕಿನ ಮಾರ್ಗ ತೋರಿಸಿದ ಅಪ್ಪ ಅಸುನೀಗಿದ್ದರು. ಬಳಿಕ ತಾಯಿ ಜೊತೆ ಅಪರ್ಣಾ ಜೀವನ ಸಾಗಿಸಿದರು.

ಆಕಾಶವಾಣಿಯತ್ತ ಹೆಜ್ಜೆ ಹಾಕಿದ ಅಪರ್ಣಾ

ಅಪ್ಪನ ಸಾವಿನ ಬಳಿಕ ಯಮುನಾ ಮೂರ್ತಿ ಅವರ ಮನೆಗೆ ಬಂದಿದ್ದರಂತೆ. ಈ ವೇಳೆ ತಂದೆಗೆ ಸಾವಿಗೆ ಸಾಂತ್ವನ ಹೇಳಿದ್ದರಂತೆ. ಈ ವೇಳೆ ಯಮುನಾ ಮೂರ್ತಿಯವರು ಆಕಾಶವಾಣಿಗೆ ಕರೆದುಕೊಂಡು ಹೋಗಿ ಆಡಿಷನ್‌ಗೆ ಹಾಜರಾಗಲು ಹೇಳಿದ್ದರಂತೆ. ಬಳಿಕ ಸಿನಿಮಾ, ದೂರದರ್ಶನದ ನಂತರ ಆಕಾಶವಾಣಿಯತ್ತ ಹೆಜ್ಜೆ ಹಾಕಿದ್ರು ಅಪರ್ಣಾ.

‘ಮಾಯಾಮೃಗ’ದಲ್ಲಿ ಅಪರ್ಣಾ

1993ರಿಂದ 2010ರವರೆಗೆ ಆಕಾಶವಾಣಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದರು. ಆದರೆ ದೂರದರ್ಶನದಲ್ಲಿ ಕೆಲಸ ಮಾಡುವ ವೇಳೆ ಅಪರ್ಣಾ ಅವರಿಗೆ ಟಿ ಎನ್​ ಸೀತಾರಾಂ ಅವರ ಪರಿಚಯವಾಯ್ತು. ಇವರ ಪರಿಚಯವೇ ‘ಮಾಯಾಮೃಗ’ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ತು. ಬಳಿಕ ‘ಮುಕ್ತ’ ಧಾರಾವಾಹಿಯಲ್ಲೂ ಅಪರ್ಣಾ ನಟಸಿದರು. ಶೀಲಾ ದೀಕ್ಷಿತ್ ಪಾತ್ರದಿಂದ ಜನರ ಮನಗೆದ್ದರು.

ಇದನ್ನೂ ಓದಿ: 2 ವರ್ಷ ಸಾವು-ಬದುಕಿನ ಹೋರಾಟದಲ್ಲಿ ಸೋತಳು.. ಅಪರ್ಣಾ ಸಾವಿಗೆ ಕಾರಣ ಬಿಚ್ಚಿಟ್ಟ ಗಂಡ; ಹೇಳಿದ್ದೇನು?

ರಾಜಕೀಯ ಪ್ರಚಾರದಿಂದ ದೂರ

ಅಪರ್ಣಾ ಅವರು ನಿರೂಪಣೆ ಮಾಡುತ್ತಿದ್ದರು ನಿಜ. ಆದರೆ ಅವರ ಜೀವನದಲ್ಲಿ ಹಲವು ರೂಪುರೇಷೆಗಳನ್ನಿಟ್ಟುಕೊಂಡು ಸಾಗಿದವರು. ಅದರಲ್ಲೊಂದು ವಿಚಾರ ಎಂದರೆ ರಾಜಕೀಯ ಪ್ರಚಾರ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡಬಾರದು ಎಂಬ ದೃಢ ನಿಲುವು ಅವರಲ್ಲಿತ್ತು. ಹೀಗಾಗಿ ಅಂತಹ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು.

ಅಪರ್ಣಾ ಜೊತೆಗೆ ಹೆಜ್ಜೆ ಹಾಕಿದ ನಾಗರಾಜ್ ವಸ್ತಾರೆ

ಜೀವನದಲ್ಲಿ ಕೊಂಚ ಬದಲಾವಣೆಯಾಗಲು ಬಾಳ ಸಂಗಾತಿಯೂ ಕಾರಣವಾಗುತ್ತಾರೆ. ಅಪರ್ಣಾ ಜೀವನದಲ್ಲಿ ಬಾಳ ಸಂಗಾತಿಯಾಗಿ ಕಾಲಿಟ್ಟ ನಾಗರಾಜ್ ವಸ್ತಾರೆ. ಅವರ ಜೀವನ ಹೆಜ್ಜೆಗೆ ಸಾತ್​ ನೀಡಿದರು.

ಬಿಗ್​ ಬಾಸ್​​ ರಿಯಾಲಿಟಿ ಶೋ 

ಕಿಚ್ಚ ಸುದೀಪ್​ ನಿರೂಪಣೆಯ ಬಿಗ್​ ಬಾಸ್​ನಲ್ಲೂ ಅಪರ್ಣಾ ಕಾಣಿಸಿಕೊಂಡಿದ್ದು ಅಚ್ಚರಿಯೇ ಸರಿ. ಇದು ಕೂಡ ಅವರ ಜೀವನದ ಮತ್ತೊಂದು ತಿರುವು. ಬಿಗ್​ ಬಾಸ್​ ಮುಗಿಸಿದ ಬಳಿಕ ಸೃಜನ್​ ಲೋಕೆಶ್​ ನಿರೂಪಣೆಯ ‘ಜಾ ಟಾಕೀಸ್’ ಕಾರ್ಯಕ್ರಮ ಕೈ ಬಿಸಿ ಕರೆಯಿತು.

ಒನ್​ ಆ್ಯಂಡ್​ ಓನ್ಲಿ ವರಲಕ್ಷ್ಮೀ

ಮಜಾ ಟಾಕೀಸ್​ನಲ್ಲಿ ‘ಒನ್​ ಆ್ಯಂಡ್​ ಓನ್ಲಿ ವರಲಕ್ಷ್ಮೀ’ಯಾಗಿ ಅಪರ್ಣಾ ಕಾಣಿಸಿಕೊಂಡು ಅನೇಕರ ಮನಗೆದ್ದರು. ಹೀಗೆ ಸಾಕಷ್ಟು ಅವಕಾಶಗಳ ಜೊತೆಗೆ ಕನ್ನಡದ ಕಂಪು ಪಸರಿಸಿದರು. ಆದರಿಂದ ಅಪರ್ಣಾರವರು ಮಾತನಾಡುವುದನ್ನೇ ನಿಲ್ಲಿಸಿರುವುದು ಬೇಸರದ ಸಂಗತಿಯಾಗಿದೆ. ಅವರ ಸಾಗಿಗೆ ಅನೇಕರು ಕಂಬನಿ ಸುರಿಸಿದ್ದಾರೆ. ಇದು ಕನ್ನಡಕ್ಕೆ ಮತ್ತೊಂದು ನಷ್ಟವೆಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments