ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೋಲಿಸರ ಭರ್ಜರಿ ಕಾರ್ಯಾಚರಣೆ ಮಾಡಿದ್ದು, ಮೊದಲ ಹಂತವಾಗಿ ಗಾಂಜಾ ಮಾರಾಟಗಾರರ ಹಾಗೂ ಖರೀದಿದಾರರ ಹೆಡೆಮುರಿ ಕಟ್ಟುವಲ್ಲಿ ಹು-ಧಾ ಪೋಲಿಸ್ ಕಮಿಷ್ನರೇಟ್ ಯಶಸ್ವಿಯಾಗಿದೆ.
ಹೌದು, ಇಷ್ಟು ದಿನ ಗಾಂಜಾ ಮತ್ತು ಡ್ರಗ್ಸ್ ಪ್ರಕರಣಗಳಲ್ಲಿ ಕೇವಲ ಮಾರಾಟಗಾರರನ್ನೇ ಬಂಧಿಸುತ್ತಿದ್ದ ಪೊಲೀಸರು ಇದೀಗ ಡ್ರಗ್ಸ್ ಮತ್ತು ಗಾಂಜಾ ಮೂಲಗಳನ್ನು ಪತ್ತೆ ಹಚ್ಚಿ ಬರೋಬರಿ ಹತ್ತು ಜನರ ಬಂಧನ ಮಾಡುವಲ್ಲಿ ಬೆಂಡಿಗೇರಿ ಪೋಲಿಸರು ಯಶಸ್ವಿಯಾಗಿದ್ದಾರೆ.
ಇಂದು (ಜು.12) ಬೆಳಂಬೆಳಿಗ್ಗೆ ಖಚಿತ ಮಾಹಿತಿಯಂತೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದು, ಅವರ ಬಳಿ ಖರೀದಿ ಮಾಡಲು ಜನರು ನಿಂತಿದ್ದಾರೆಂಬ ಮಾಹಿತಿ ಆಧರಿಸಿ ಬೆಂಡಿಗೇರಿ ಪೊಲೀಸರು ಹು-ಧಾ ಪೋಲಿಸ್ ಆಯುಕ್ತ ಎನ್.ಶಶಿಕುಮಾರ್, ಹಾಗೂ ಡಿಸಿಪಿಗಳಾದ ಎಮ್.ನಂದಗಾವಿ, ರವೀಶ್ ಸಿ.ಆರ್ ಅವರ ಮಾರ್ಗದರ್ಶನದಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸರು ದಾಳಿ ಮಾಡಿ ಗಾಂಜಾ ಮಾರಾಟಗಾರರು ಹಾಗೂ ಖರೀದಿದಾರರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಅಕಿಲೇಶ್ ಎರಮಾಶನ್,ಅಂತೋನಿ ಪರ್ನಾಂಡಿಸ್, ಕಿರಣ ಕುರಕುಂದಿ, ಮಹದೇವ ಮಜ್ಜಿಗುಡ್ಡ, ಪ್ರಕಾಶ ಕಲಾಲ್, ಅರುಣ ಕ್ಯಾಕಟ್ಟಿ, ಲಕ್ಷ್ಮಣ ನಿಡಗುಂದಿ, ಪರಾನ್ ನವಲಗುಂದ, ಆದರ್ಶ ಎರಮಶಲ್, ವಿಶಾಲ ಗಾಯಕವಾಡ ಎಂದು ಗುರುತಿಸಲಾಗಿದೆ. ಇವರಿಂದ ಒಟ್ಟು 1.779 ಕೆಜಿ ಹಾಗೂ 2000 ನಗದನ್ನು ವಶಪಡಿಸಿಕೊಂಡಿದ್ದಾರೆ.ಈ ಮೂಲಕ ಅವಳಿನಗರವನ್ನು ಗಾಂಜಾ ಮುಕ್ತ ನಗರವನ್ನಾಗಿ ಮಾಡುವಲ್ಲಿ ಪೊಲೀಸರು ಶಪಥ ಮಾಡಿದ್ದಾರೆ.
ಇನ್ನು ಈ ಬಗ್ಗೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿದ್ದು, ಹು-ಧಾ ಪೋಲಿಸ್ ಕಮಿಷ್ನರೇಟ್ ವ್ಯಾಪ್ತಿಯ ಬೆಂಡಿಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 1.8 ಕೆಜಿ ಗಾಂಜಾ ವಶಪಡಿಸಿಕೊಂಡು, 10 ಜನರ ಬಂಧನ ಮಾಡಲಾಗಿದೆ. ಬಂಧಿತರು ಹುಬ್ಬಳ್ಳಿ ಹಾಗೂ ಅಕ್ಕಪಕ್ಕದ ನಿವಾಸಿಗಳಾಗಿದ್ದಾರೆ. ಬಂಧಿತರಲ್ಲಿ ಹಲವರ ಮೇಲೆ ಡ್ರಗ್ಸ್ ಹಾಗೂ ಗಾಂಜಾ ಮಾರಾಟದ ಕೇಸ್’ಗಳಿವೆ. ಈ ಬಗ್ಗೆ ತನಿಖೆ ನಡೆಸಲಾಗುವುದು. ಈ ಹಿಂದಿನ ಕೇಸ್’ಗಳನ್ನು ಪರಿಶೀಲಿಸಿದ್ದೇನೆ. ಅವುಗಳನ್ನು ಸಮಗ್ರ ತನಿಖೆಗೆ ಸೂಚಿಸಿದ್ದೇನೆ. ಗೋವಾ, ಮಿರಜ್, ಮಹಾರಾಷ್ಟ್ರ ಭಾಗದಿಂದ ಗಾಂಜಾ ಪೂರೈಕೆಯಾಗುವ ಮಾಹಿತಿ ಇದೆ. ಮುಂದಿನ ದಿನಗಳಲ್ಲಿ ನಗರವನ್ನು ಗಾಂಜಾ ಮುಕ್ತವನ್ನಾಗಿಸಲು ಶ್ರಮಿಸಲಾಗುವುದು ಎಂದರು.