•ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಶ್ವಾನಕ್ಕೆ ರಕ್ತ ನೀಡಿದ ಮತ್ತೊಂದು ಶ್ವಾನ
•ಕೊಪ್ಪಳದ ಪಶುವೈದ್ಯ ಡಾ ಚಂದ್ರಶೇಖರ್ ಅವರ ಕಾರ್ಯಕ್ಕೆ ಮೆಚ್ಚುಗೆ
•ಸರ್ವ ಪ್ರಯತ್ನದಾಚೆಯೂ ಉಳಿಯಲಿಲ್ಲ ಜಿಲ್ಲಾಧಿಕಾರಿಗಳ ಶ್ವಾನ
ಕೊಪ್ಪಳ: ಜಿಲ್ಲೆಯಲ್ಲೊಂದು ಅಪರೂಪಕ್ಕಿಂತ ಅಪರೂಪದ ಘಟನೆಯೊಂದು ನಡೆದಿದೆ. ಪ್ರಾಣಿಗಳು ಗುಣದಲ್ಲಿ ಮೇಲು ಎಂಬ ಸಾಲುಗಳಿಗೆ ಸಾಕ್ಷಿಯಾಗಿ ನಿಂತಿದೆ ಒಂದು ಶ್ವಾನ. ಕೊಪ್ಪಳದ ಜಿಲ್ಲಾಧಿಕಾರಿ ನಳೀನ್ ಅತುಲ್ ಅವರ ಲ್ಯಾಬ್ರಡರ್ ಶ್ವಾನ ಕಿಡ್ನಿ ವೈಫಲ್ಯದಿಂದ ಬಳಲುತ್ತಿತ್ತು. ಹೀಗಾಗಿ ಅದಕ್ಕೆ ತುರ್ತಾಗಿ ರಕ್ತವನ್ನು ನೀಡಬೇಕಾಗಿತ್ತು.
ರಕ್ತದಾನ ಮಾಡುವ ನಾಯಿಯನ್ನು ಹುಡುಕುತ್ತಿದ್ದರು. ಸ್ಥಳೀಯ ಪಶುವೈದ್ಯರಾದ ಡಾ ಚಂದ್ರಶೇಖರ್, ಶ್ವಾನಗಳನ್ನು ಸಾಕುತ್ತಿರುವ ನಗರದ ಮೂರು ಜನರಿಗೆ ಕರೆ ಮಾಡಿ ಸ್ಥಿತಿಯನ್ನು ವಿವರಿಸಿ ರಕ್ತದ ಸ್ಯಾಂಪಲ್ನ್ನು ತರಿಸಿಕೊಂಡಿದ್ದಾರೆ. ಅದರಲ್ಲಿ ನಗರದ ನಿವಾಸಿ ಪ್ರಾದ್ಯಪಕರಾಗಿದ ಬಸವರಾಜ್ ಎಂಬುವವರ ಭೈರವ ಹೆಸರಿನ ಡಾಬರ್ಮನ್ ಶ್ವಾನದ ರಕ್ತ ಹೊಂದಾಣಿಕೆಯಾಗಿದೆ. ಕೂಡಲೇ ಭೈರವನ ರಕ್ತವನ್ನು ಪಡೆದುಕೊಂಡ ವೈದ್ಯರು, ಡಾಬರ್ಮನ್ಗೆ ಡಿಪ್ಸ್ ಮೂಲಕ ನೀಡಿದ್ದಾರೆ.
ಭೈರವನ ದೇಹದಿಂದ ಒಟ್ಟು 300 ಎಂಎಲ್ ರಕ್ತವನ್ನು ಪಡೆದುಕೊಂಡು ಲ್ಯಾಬ್ರಾಡರ್ಗೆ ನೀಡಲಾಗಿದೆ. ಇದು ಸದ್ಯ ದೊಡ್ಡ ಸುದ್ದಿಯಾಗಿ ಜಿಲ್ಲೆಯಲ್ಲಿ ಹರಡಿದೆ. ಡಾ ಚಂದ್ರಶೇಖರ್ ಅವರ ಈ ಪ್ರಯತ್ನವನ್ನು ಹಾಗೂ ಭೈರವ ಅನ್ನೋ ಶ್ವಾನದ ಗುಣವನ್ನು ಎಲ್ಲರೂ ಹಾಡಿಹೊಗಳುತ್ತಿದ್ದಾರೆ. ಆದ್ರೆ ವಿಪರ್ಯಾಸ ಅಂದ್ರೆ ಜಿಲ್ಲಾಧಿಕಾರಿಗಳ 10 ವರ್ಷದ ಶ್ವಾನವನ್ನು ಬದುಕಿಸಲು ಡಾ. ಚಂದ್ರಶೇಖರ್ ಅವರ ಸರ್ವಪ್ರಯತ್ನ ಕೇವಲ ನಾಲ್ಕೈದು ದಿನ ಮಾತ್ರ ಫಲ ಕೊಟ್ಟಿದೆ. ರಕ್ತ ಪಡೆದು ಕೊಂಚ ಚೇತರಿಸಿಕೊಂಡಿದ್ದ ಲ್ಯಾಬ್ರಾಡರ್ ಬಳಿಕ ಅಸುನೀಗಿದೆ.