•ಇಬ್ಬರು ಅಂತರ್ ಜಿಲ್ಲಾ ಮನೆಗಳ್ಳರು ಅರೆಸ್ಟ್
•ಕಳ್ಳರಿಂದ 19.50 ಲಕ್ಷ ರೂ ಮೌಲ್ಯದ ಸ್ವತ್ತು ವಶಕ್ಕೆ
•08 ಮನೆಗಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿದ ಪೊಲೀಸರು
ಹುಬ್ಬಳ್ಳಿ: ಇಬ್ಬರು ಅಂತರ್ ಜಿಲ್ಲಾ ಮನೆಗಳ್ಳರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 19.50 ಲಕ್ಷ ರೂ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ಬೆಳಗಾವಿ ಜಿಲ್ಲೆ ಖಾನಾಪುರದ ದೀಪಕ್ ಅಲಿಯಾಸ್ ರೋಹನ್ ಮಾತಂಗಿ ಮತ್ತು ಗದಗ ಜಿಲ್ಲೆ ರೋಣದ ಶಿವನಾಗಯ್ಯ ಅಲಿಯಾಸ್ ಶಿವನಾಗು ಉಮಚಗಿಮಠ ಬಂಧಿತ ಆರೋಪಿಗಳು. ಇಬ್ಬರು ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂನ್ 20 ರಂದು ಕಳ್ಳತನ ಮಾಡಿದ್ದರು.
ಪೊಲೀಸ್ ಇನ್ಸ್ಸ್ಪೆಕ್ಟರ್ ಪ್ರವೀಣ್ ನೀಲಮ್ಮನವರ್ ನೇತೃತ್ವದ ತಂಡದಿಂದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 244 ಗ್ರಾಂ ತೂಕದ ಬಂಗಾರ ಮತ್ತು 2500 ಗ್ರಾಂ ತೂಕದ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಜೊತೆಗೆ 01 ಲ್ಯಾಪಟಾಪ್, 01 ಸ್ಕೂಟಿ, 02 ವಾಚ್ ಮತ್ತು ಕಳ್ಳತನಕ್ಕೆ ಬಳಸಿದ್ದ 1 ಬೈಕ್ ವಶಕ್ಕೆ ಪಡೆಯಲಾಗಿದೆ. ಪೊಲೀಸರು ಒಟ್ಟು 19.50 ಲಕ್ಷ ರೂ ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ.
ರೋಹನ್ ಮಾತಂಗಿ ಮತ್ತು ಶಿವನಾಗಯ್ಯನನ್ನು ಪೊಲಿಸರು ವಿಚಾರಣೆ ಮಾಡಿದಾಗ ವಿವಿಧೆಡೆ ಕಳ್ಳತನ ಕೃತ್ಯ ಎಸಗಿರೋ ವಿಚಾರ ಬಾಯಿಬಿಟ್ಟಿದ್ದಾರೆ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಯಲ್ಲಿ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಗೋಕುಲ್ ರೋಡ್ ಠಾಣೆಯ ವ್ಯಾಪ್ತಿಯಲ್ಲಿ 2, ವಿದ್ಯಾನಗರ ಠಾಣೆಯ 1, ಬೆಳಗಾವಿ ಮಾರಿಹಾಳ ಠಾಣೆಯ 2, ಖಾನಾಪುರ ಠಾಣೆಯ 2, ಬೆಳಗಾವಿ ಮಾಳಮಾರುತಿ ಠಾಣೆಯ 1 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಬಗ್ಗೆ ಒಪ್ಪಿಕೊಂಡಿದ್ದಾರೆ. ಒಟ್ಟು 08 ಮನೆಗಳ್ಳತನ ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಗೋಕುಲ್ ಠಾಣೆ ಪೊಲೀಸರ ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.