ಹುಬ್ಬಳ್ಳಿ: ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅಪ್ರಾಪ್ತರು ಸೇರಿದಂತೆ ಐವರನ್ನು ಹೆಡೆಮುರಿ ಕಟ್ಟಿದ್ದಾರೆ. ಹುಬ್ಬಳ್ಳಿಯ ವೀರಾಪುರ ಓಣಿಯ ಮುಬಾರಕ್, ಕೇಶ್ವಾಪುರದ ಚಂದ್ರಶೇಖರ್, ರಾಮಲಿಂಗೇಶ್ವರ ನಗರದ ತೌಶಿಪ್ ಸೇರಿದಂತೆ ಇನ್ನಿಬ್ಬರು ಆರೋಪಿಗಳು ಅರೆಸ್ಟ್ ಆಗಿದ್ದು, ಬಂಧಿತರಿಂದ ಮೂರು ಲಕ್ಷ ಮೌಲ್ಯದ ಮೂರು ಕೆಜಿ ಗಾಂಜಾ ಹಾಗೂ ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರು
ಅಂತರಾಜ್ಯದಿಂದ ಗಾಂಜಾ ತಂದು ಹುಬ್ಬಳ್ಳಿಯಲ್ಲಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಇನ್ಸೆಕ್ಟರ್ ಅಲಿಶೇಕ್, ಪಿಎಸ್‌ಐ ಶರಣ ದೇಸಾಯಿ ಹಾಗೂ ತಂಡದವರು, ದಕ್ಷಿಣ ವಿಭಾಗದ ಎಸಿಪಿ ಚಿಕ್ಕಮಠ ಮಾರ್ಗದರ್ಶನದಲ್ಲಿ ದಾಳಿ ನಡೆಸಿ, ನಗರದ ಮಂಟೂರ ರಸ್ತೆಯ ಬಳಿಯ ರೈಲ್ವೆ ಗೇಟ್ ಬಳಿ ಬಂಧಿಸಿದ್ದಾರೆ. ಐದು ಜನ ಆರೋಪಿಗಳ ಮೇಲೆ NDPS ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರು ಅಪ್ರಾಪ್ತರನ್ನು ರಿಮ್ಯಾಂಡ್ ಹೋಮ್ ಹಾಗೂ ಇನ್ನುಳಿದ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇತ್ತೀಚೆಗೆ ಅವಳಿನಗರದಲ್ಲಿ ನಡೆದ ಕೊಲೆ ಪ್ರಕರಣಗಳಲ್ಲಿ ಗಾಂಜಾ ಸೇವನೆ ಮಾಡಿ ಹತ್ಯೆ ಮಾಡಲಾಗಿದೆ ಎಂಬ ವಿಷಯ ತಿಳಿದು ಬಂದಿತ್ತು. ಅದರಂತೆ ಹುಬ್ಬಳ್ಳಿಯಲ್ಲಿ ಗಾಂಜಾ ವಾಸನೆ ಜೋರಾಗಿದ್ದು, ನಶೆಯಲ್ಲಿ ಅಪರಾಧ ಕೃತ್ಯ ಎಸಗಲಾಗುತ್ತಿರುವ ಕುರಿತು ಸಾರ್ವಜನಿಕರು ಕಿಡಿಕಾರಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಹುಬ್ಬಳ್ಳಿ ಪೊಲೀಸರು, ಇದೀಗ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದ್ದಾರೆ.