ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂದು ಕನ್ನಡ ಪರ ಸಂಘಟನೆಗಳು ಪರಭಾಷಾ ಬೋರ್ಡ್ಗಳ ಮೇಲೆ ಸಮರ ಸಾರಿದ್ದವು. ಈ ಮೂಲಕ ವರ್ತಕರು ಹಾಗೂ ಕನ್ನಡ ಪರ ಹೋರಾಟಗಾರರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಸದ್ಯ ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೋರಾಟಗಾರ ವಾಟಾಳ್ ನಾಗರಾಜ್ ಗಡುವು ಮುಗಿಯೋದರೊಳಗೆ ಬೋರ್ಡ್ ಬದಲಾಗದಿದ್ದರೆ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು, ಫೆಬ್ರವರಿ 25: ನಾಮಫಲಕಕ್ಕಾಗಿ ಮತ್ತೆ ಕನ್ನಡದ ರಣಕಹಳೆ ಮೊಳಗಲಿದೆ. ಕನ್ನಡ ನಾಮಫಲಕ ಕಡ್ಡಾಯಕ್ಕೆ 3 ದಿನಗಳಷ್ಟೇ ಬಾಕಿ ಉಳಿದಿದೆ. ಗಡುವು ಮುಗಿಯೋದರೊಳಗೆ ಬೋರ್ಡ್ ಬದಲಾಗದಿದ್ದರೆ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಕನ್ನಡ ನಾಮಫಲಕಕ್ಕೆ ಇನ್ನೂ ಕೆಲವರು ಆಸಕ್ತಿ ತೋರಿಲ್ಲ. ನಾಮಫಲಕದ ಜೊತೆಗೆ ಕನ್ನಡಿಗರಿಗೆ ಉದ್ಯೋಗ ಬೇಕು. ಐಟಿ-ಬಿಟಿ ಕಂಪನಿಗಳಲ್ಲಿ ಉದ್ಯೋಗವನ್ನ ಕೊಡಬೇಕು ಎಂದು ಆಗ್ರಹ ಮಾಡಿದ್ದಾರೆ. ಮುಂದಿನ ತಿಂಗಳು ಎಲ್ಲಾ ಸಂಘಟನೆ ಒಗ್ಗೂಡಿಸುತ್ತೇವೆ. ಕನ್ನಡ ಬೋರ್ಡ್ ಕಡ್ಡಾಯ ಆಗದಿದ್ದರೆ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕನ್ನಡ ಮರೆತ ಅಂಗಡಿ-ಮುಂಗಟ್ಟು ಮಾಲೀಕರ ವಿರುದ್ಧ ಕನ್ನಡ ಪರ ಸಂಘಟನೆಗಳು ಇತ್ತೀಚೆಗೆ ಪ್ರತಿಭಟಿಸಿದ್ದರು. ಬಳಿಕ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಸೂಚನೆಯನ್ನ ಸರ್ಕಾರ ನೀಡಿತ್ತು. ಫೆಬ್ರವರಿ 28ರ ಡೆಡ್ಲೈನ್ ನೀಡಿದೆ. ಈ ಗಡುವು ಮುಗಿಯಲು ಸದ್ಯ ಮೂರು ದಿನವಷ್ಟೇ ಬಾಕಿ ಇದೆ.
ಕನ್ನಡ ನಿರ್ಲಕ್ಷಿಸಿದರೆ ದೂರು
ಕನ್ನಡ ನಾಮಫಲಕ ಅಳವಡಿಕೆ ವಿಚಾರ ವಿಧಾನಸಭೆ, ಪರಿಷತ್ನಲ್ಲೂ ಚರ್ಚೆಯಾಗಿ, ಅಂಗೀಕಾರ ಪಡೆದಿದೆ. ಕನ್ನಡ ನಾಮಫಲಕ ಕುರಿತು ಸಮಿತಿ ರಚಿಸಲಾಗಿದ್ದು, ಕೈಗಾರಿಕೆಗಳು ಕೂಡ ಕನ್ನಡ ಬಳಕೆ ಮಾಡಬೇಕು ಅಂತ ಸಚಿವ ಶಿವರಾಜ್ ತಂಗಡಗಿ ಎಚ್ಚರಿಸಿದ್ದರು. ಕನ್ನಡ ಕಣ್ಗಾವಲು ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಕನ್ನಡ ನಿರ್ಲಕ್ಷಿಸಿದರೆ ದೂರು ನೀಡಬಹುದು ಎಂದು ಮಾಹಿತಿ ನೀಡಿದ್ದರು.