ಹುಬ್ಬಳ್ಳಿ: ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷೆ, ಜಿಲ್ಲಾಧಿಕಾರಿ ದಿವ್ಯ ಪ್ರಭು, 20 ಕಡೆ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ ರೈತರಿಂದ ನೇರವಾಗಿ ಹೆಸರುಕಾಳು ಖರೀದಿ ಮಾಡುವಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ಹೆಸರುಕಾಳು ದರ ದಿಢೀರ್ ಏರಿಕೆ ಕಂಡಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಈ ಹಿಂದೆ ದಲ್ಲಾಳಿಗಳು ಮನ ಬಂದಂತೆ ಹೆಸರುಕಾಳಿನ ದರ ಕೇಳುತ್ತಿದ್ದರು. ಸದ್ಯ ಜಿಲ್ಲೆಯಲ್ಲಿ 20 ಹೆಸರುಕಾಳು ಖರೀದಿ ಕೇಂದ್ರ ಸ್ಥಾಪನೆ ಹಿನ್ನೆಲೆ ಕೆಲ ದಲ್ಲಾಳಿಗಳು ಕ್ವಿಂಟಾಲ್ ಹೆಸರುಕಾಳಿಗೆ 1,000 ರಿಂದ 2,000 ರೂ. ಹೆಚ್ಚುವರಿ ದರ ಏರಿಕೆ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ 20 ಸ್ಥಳಗಳಲ್ಲಿ ರೈತರಿಂದ ಹೆಸರು ಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಾಲ್ಗೆ 8,682 ರೂ.ದಂತೆ ಖರೀದಿ ಮಾಡಲಾಗುತ್ತದೆ. ಇಲ್ಲಿಯವರೆಗೆ ಕ್ವಿಂಟಾಲ್ ಅನ್ನು ಕೇವಲ 6 ಸಾವಿರ ದಿಂದ 6,800 ರೂ. ಬೆಲೆಗೆ ಖರೀದಿಸುತ್ತಿದ್ದ ಕೆಲವು ದಲ್ಲಾಳಿಗಳು, ಖರೀದಿ ಕೇಂದ್ರಗಳ ಎಫೆಕ್ಟ್ನಿಂದಾಗಿ ಒಂದೇ ದಿನದಲ್ಲಿ ಒಂದು ಸಾವಿರ ರೂ.ಬೆಲೆ ಹೆಚ್ಚಿಸಿ ಕ್ವಿಂಟಾಲ್ ಹೆಸರುಕಾಳು ಉತ್ಪನ್ನವನ್ನು 7 ದಿಂದ 8 ಸಾವಿರ ರೂ.ಗೆ ಖರೀದಿಸಲು ಮುಗಿಬೀಳುತ್ತಿದ್ದಾರೆ.
ಸುಳ್ಳ ಗ್ರಾಮದ ರೈತ ವಿಜಯ ಮಾಳಕೋಟಿ ಮಾತನಾಡಿ, “ಜಿಲ್ಲೆಯಲ್ಲಿ ಶೇ. 70 ರಷ್ಟು ಹೆಸರುಕಾಳು ಬೆಳೆಯಲಾಗಿದೆ. ಮಳೆ ಕೊರತೆಯಿಂದ ಕಡಿಮೆ ಇಳುವರಿ ಬಂದಿದೆ. ಪ್ರತಿ ಎಕರೆಗೆ 8 ರಿಂದ 9 ಕ್ವಿಂಟಾಲ್ ಬರುವ ಬೆಳೆ ಸದ್ಯ 1 ರಿಂದ 2 ಕ್ವಿಂಟಾಲ್ ಬಂದಿದೆ. ಈಗ ಖರೀದಿ ಕೇಂದ್ರ ಸ್ಥಾಪನೆ ಮಾಡಿದ್ದರಿಂದ 2 ಸಾವಿರದಷ್ಟು ದರ ಹೆಚ್ಚಳವಾಗಿದೆ. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದಿಂದ ಎಂಎಸ್ಪಿ ಹೆಚ್ಚಳ; ಇತ್ತೀಚಿಗಷ್ಟೇ ಕೇಂದ್ರ ಸರ್ಕಾರವು ಹೆಸರುಕಾಳು, ಸೂರ್ಯಕಾಂತಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ಹೆಚ್ಚಳಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಇದರಿಂದ ದೇಶದ ಅನ್ನದಾತರಿಗೆ ಅನುಕೂಲವಾಗಿದೆ. ಬೆಲೆ ಹೆಚ್ಚಿಸಿದ್ದರಿಂದ ಅವರ ಮೊಗದಲ್ಲಿ ಮಂದಹಾಸ ಮೂಡಿದೆ.
22,215 ಮೆಟ್ರಿಕ್ ಟನ್ ಹೆಸರುಕಾಳು ಹಾಗೂ 13,210 ಮೆಟ್ರಿಕ್ ಟನ್ ಸೂರ್ಯಕಾಂತಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ. ಬೆಂಬಲ ಬೆಲೆ ಯೋಜನೆಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳಿಗೆ ಪ್ರತಿ ಕ್ವಿಂಟಲ್ಗೆ 8,682 ರೂ. ಹಾಗೂ ಸೂರ್ಯಕಾಂತಿಗೆ 7,280 ರೂ. ಬೆಲೆ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾವನೆಗೆ ಸಮ್ಮತಿಸಿರುವುದರಿಂದ ಖರೀದಿ ಏಜನ್ಸಿ ನೇಮಕ ಮಾಡಿ ಆದೇಶ ಹೊರಡಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿತ್ತು.