ಪ್ರೀತಿಗೆ ಕಣ್ಣು ಇಲ್ಲ ಹಾಗೆ ಮನಸು ಕೂಡ ಇಲ್ಲ ಹೌದು ಮನೆಯಲ್ಲಿ ಬಡತನ ಇದ್ರೂ ಮಗಳು ಚೆನ್ನಾಗಿ ಓದಬೇಕು ಎನ್ನೋ ಹಂಬಲಕ್ಕೆ ಆಕೆಯೂ ಸಾಥ್ ನೀಡಿದ್ದಳು, ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟ್ ಪಡೆದುಕೊಂಡು ಓದುತ್ತಿದ್ದಾಕೆ ಎಂದಿನಂತೆ ನಿನ್ನೆ ಗುರುವಾರ ಕೂಡ ಮನೆಯಿಂದ ಕಾಲೇಜಿಗೆ ಹೊರಟಿದ್ದಳು, ಮಗಳು ಮಾಮೂಲಿಯಾಗಿ ಸಂಜೆ ಮನೆಗೆ ಮರಳುತ್ತಾಳೆಂಬ ನಿರೀಕ್ಷೆಯಲ್ಲಿದ್ದವರಿಗೆ ಗೊತ್ತಿರಲಿಲ್ಲ ಅವಳು ಬರುವುದಿಲ್ಲ ಎಂದೂ.
ಪ್ರೀತಿ ನಿರಾಕರಿಸಿದ್ದಕ್ಕೆ ಗೆಳತಿಯನ್ನೇ ಕ್ರೂರವಾಗಿ ಕೊಂದಿದ್ದಾನೆ ಪಾಗಲ್ ಪ್ರೇಮಿ. ಮಾತಾಡೋಕೆ ಕರೆದೊಯ್ದು ಕುತ್ತಿಗೆ ಸೀಳಿದ್ದವ ಅರೆಸ್ಟ್. ಗೆಳೆಯನಿಂದಲೇ ಬಲಿಯಾಗಿದ್ದಾಳೆ ಇಂಜಿನಿಯರಿಂಗ್ ಚೆಲುವೆ. ಹೌದು ಹಾಸನ ಜಿಲ್ಲೆಯೆ ಬೆಚ್ಚಿಬೀಳುವಂತಾ ಬರ್ಬರ ಹತ್ಯೆಯೊಂದು ಹಾಸನ ತಾಲ್ಲೂಕಿನ ಅಗಿಲೆ ಗ್ರಾಮದ ಸಮೀಪ ಇರೋ ಕುಂತಿ ಬೆಟ್ಟದಲ್ಲಿ ನಡೆದಿದೆ.
ಬೆಟ್ಟದ ತುದಿಗೆ ಕರೆದೊಯ್ದು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸುಚಿತ್ರಾಳನ್ನ ಆಕೆಯ ಗೆಳೆಯ ತೇಜಸ್ ಎಂಬಾತನೆ ಬರ್ಬರವಾಗಿ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿಯಲ್ಲಿ ಎರಡನೆ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದ ಸುಚಿತ್ರಾ ಇಂದು ಬೆಳಿಗ್ಗೆ ಮಾಮೂಲಿಯಾಗಿ ಕಾಲೇಜಿಗೆ ಹೋಗಿದ್ದಾಳೆ.
ಮಧ್ಯಾಹ್ನದ ವೇಳೆಗೆ ಮಗಳ ಹತ್ಯೆಯಾಗಿರೋ ಬಗ್ಗೆ ಬಂದ ಬರ ಸಿಡಿಲಿನ ಸುದ್ದಿ ತಿಳಿದು ಸ್ಥಳಕ್ಕೆ ಹೋದ ಪೋಷಕರಿಗೆ ಮಗಳನ್ನ ಕುತ್ತಿಗೆ ಸೀಳಿ ಬರ್ಬರವಾಗಿ ಕೊಲೆ ಮಾಡಿರೋದು ಪತ್ತೆಯಾಗಿದೆ. ಕೊಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದ ಕ್ರೂರಿಯನ್ನ ವಶಕ್ಕೆ ಪಡೆದುಕೊಂಡಿರೊ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆ ನಡಸುತ್ತಿದ್ದು ಪ್ರತಿಭಾವಂತೆಯನ್ನ ಕೊಂದ ನೀಚನಿಗೆ ಕಠಿಣ ಶಿಕ್ಷೆಯಾಗಲಿ ಎಂದು ಪೋಷಕರು ಆಗ್ರಹಿಸಿದ್ದಾರೆ.
ಮೂಲತಃ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಕವಳಗೆರೆ ಗ್ರಾಮದ ಲೋಕೇಶ್ ಹಾಗು ಪುಷ್ಪಾ ದಂಪತಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ರು, ತಾನು ಮಾಡೋದು ಡ್ರೈವರ್ ಕೆಲಸ ಮಡದಿ ಗಾರ್ಮೆಂಟ್ಸ್ ನಲ್ಲಿ ಕೂಲಿ ಮಾಡ್ತಾರೆ ಆದ್ರೆ ತನ್ನ ಮಕ್ಕಳಿಬ್ಬರು ಚನ್ನಾಗಿ ಓದಬೇಕು ಎನ್ನೋ ಮಹದಾಸೆಯಿಂದ ಹಾಸನದಲ್ಲಿ ಮನೆ ಮಾಡಿಕೊಂಡು ಮಕ್ಕಳನ್ನ ಚೆನ್ನಾಗಿ ಓದಿಸಿದ್ರು, ದೊಡ್ಡ ಮಗಳು ಸುಚಿತ್ರಾ ಕೂಡ ಚನ್ನಾಗಿ ಓದಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಪಡೆದು ಚೆನ್ನಾಗಿಯೇ ಓದುತ್ತಿದ್ದಳು.
ಇದೇ ಕಾಲೇಜಿನಲ್ಲಿ ಓದಿದ್ದ ಹಾಸನದವನೇ ಆದ ತೇಜಸ್ ಎಂಬಾತನ ಪರಿಚಿಯವಾಗಿ ಆತ್ಮೀಯತೆಯೂ ಇತ್ತು, ತೇಜಸ್ ಸುಚಿತ್ರಾಳನ್ನ ಇಷ್ಟಪಟ್ಟಿದ್ದನಂತೆ, ಆದ್ರೆ ನೀನು ನನಗೆ ಇಷ್ಟ ಇಲ್ಲ ಎಂದು ಸುಚಿತ್ರ ಹೇಳಿದ್ದಕ್ಕೆ ಕೆರಳಿದ್ದ ತೇಜಸ್ ಆಕೆಯನ್ನ ಮಾತನಾಡಲೆಂದು ಕುಂತಿ ಬೆಟ್ಟಕ್ಕೆ ಕರೆದೊಯ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.