Hubli News: ಹುಬ್ಬಳ್ಳಿ: ಮೀಟರ್ ದಂಧೆಕೋರರ ಮೇಲೆ ಅವಳಿ ನಗರ ಪೋಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 7 ಪ್ರಕರಣ ದಾಖಲಾಗಿದ್ದು, 25 ಜನ ಮೀಟರ್ ದಂಧೆಕೋರರನ್ನು ಬಂಧಿಸಲಾಗಿದೆ ಎಂದು ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಅಪ್ರಾಪ್ತ ವಿದ್ಯಾರ್ಥಿಗಳನ್ನು ಮೀಟರ್ ಬಡ್ಡಿ ದಂಧೆಗೆ ಬಳಸಿಕೊಳ್ಳುತ್ತಿರುವ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಅವಳಿನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 7 ಪ್ರಕರಣ ದಾಖಲು ಮಾಡಲಾಗಿದೆ. ಧಾರವಾಡದ ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ 2 ಪ್ರಕರಣ ದಾಖಲು, 4 ಜನರ ಬಂಧನ ಮಾಡಲಾಗಿದೆ. ಮತ್ತೊಂದೆಡೆ ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಪ್ರಕರಣ ದಾಖಲು ಮಾಡಿ ನಾಲ್ವರ ಬಂಧನ ಮಾಡಲಾಗಿದೆ. ಧಾರವಾಡ ಉಪ ನಗರ ಠಾಣಾ ವ್ಯಾಪ್ತಿಯಲ್ಲಿ 2 ಪ್ರಕರಣ ದಾಖಲು ಮಾಡಿ ಐವರನ್ನು ಬಂಧನ ಮಾಡಲಾಗಿದೆ ಎಂದರು.
ಬೆಂಡಿಗೇರಿ ಠಾಣಾ ವ್ಯಾಪ್ತಿಯಲ್ಲಿ ಒಂದು ಪ್ರಕರಣ ದಾಖಲಿಸಿ 12 ಜನರ ಬಂಧನ ಮಾಡಿ ಬಂಧಿತರಿಂದ 10 ಬೈಕ್ ಮತ್ತು 10 ಮೊಬೈಲ್ ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು. ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ದಾಖಲೆ ಪತ್ರ, ಎರಡು ಹರಿತ ಆಯುಧ, ಖಾಲಿ ಚೆಕ್, ಬಾಂಡ್ ಪೇಪರ್ ವಶಕ್ಕೆ
ಮೀಟರ್ ಬಡ್ಡಿ ದಂಧೆಗೆ ಅಪ್ರಾಪ್ತರನ್ನು ಬಳಸಿಕೊಳ್ಳುತ್ತಿದ್ದರು ಈ ಕುರಿತು ಸಾಕಷ್ಟು ದೂರು ಬಂದಿದ್ದವು . ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ್ದೇವೆ ಈ ಕಾರ್ಯಾಚರಣೆಯನ್ನು ಮುಂದುವರೆಸುತ್ತೇವೆ . ಯಾರೇ ಅಪ್ರಾಪ್ತರನ್ನು ಇಂತಹ ಧಂಧೆಗೆ ಬಳಸಿಕೊಂಡಲ್ಲಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಮೀಟರ್ ಬಡ್ಡಿ ದಂಧೆ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದು ಎನ್ ಶಶಿಕುಮಾರ್ ಮಾಹಿತಿ ನೀಡಿದರು.