ದೆಹಲಿ ಸರ್ಕಾರ ಮತ್ತು ಅವರ ಅಧಿಕಾರಿಗಳ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವಾಗಿದೆ. ಇದೊಂದು ದುರಂತ ಅಲ್ಲ, ಕೊಲೆಯಾಗಿದೆ.
ನವದೆಹಲಿ: ದೆಹಲಿಯ ರಾಜೇಂದ್ರ ನಗರದಲ್ಲಿರುವ ಐಎಎಸ್ ಕೋಚಿಂಗ್ ಸೆಂಟರ್ ಬೇಸ್ಮೆಂಟ್‌ನಲ್ಲಿ ಇದ್ದಕ್ಕಿದ್ದಂತೆ ನೀರು ತುಂಬಿದ ಕಾರಣ ಮೂರು ವಿದ್ಯಾರ್ಥಿಗಳು ಅಸುನೀಗಿದ್ದಾರೆ. ಬೇಸ್ಮೆಂಟ್ ನಲ್ಲಿರುವ ಗ್ರಂಥಾಲಯದಲ್ಲಿ ಸುಮಾರು 30 ವಿದ್ಯಾರ್ಥಿಗಳು ಓದುತ್ತಿದ್ದರು. ನೋಡ ನೋಡುತ್ತಿದ್ದಂತೆ ಮಳೆನೀರು ನುಗ್ಗಿದ ಪರಿಣಾಮ ಮೂವರ ಪ್ರಾಣಪಕ್ಷಿ ಹಾರಿ ಹೋಗಿದೆ. ಇದು ಆಕಸ್ಮಿಕ ಘಟನೆಯಲ್ಲ, ದೆಹಲಿಯ ಎಎಪಿ ಸರ್ಕಾರದ ಕೊಲೆ ಎಂದು ಆರೋಪಿಸಿರುವ ಬಿಜೆಪಿ ಪ್ರತಿಭಟನೆ ನಡೆಸಿದೆ. ಎಎಪಿ ಸರ್ಕಾರದ ಜಲಮಂಡಳಿ ಸಚಿವೆ ಅತಿಶಿ ಮತ್ತು ಸ್ಥಳೀಯ ಶಾಸಕ ದುರ್ಗೇಶ್ ಪಾಠಕ್ ವಿರುದ್ಧ ಬಿಜೆಪಿ ಗಂಭೀರ ಆರೋಪಗಳನ್ನು ಮಾಡಿದೆ. ಘಟನೆ ಸಂಬಂಧ ಸಚಿವೆ ಅತಿಶಿ ವಿರುದ್ಧ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ನೀಡಲಾಗಿದೆ. ಮತ್ತೊಂದೆಡೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ದೆಹಲಿ ಒಳಚರಂಡಿಗಳ ಸ್ವಚ್ಛತೆ ಮಾಡದ ಹಿನ್ನೆಲೆ ನೀರು ಹೊರ ಬಂದು ತರಬೇತಿ ಕೇಂದ್ರದ ನೆಲಮಹಡಿಯಲ್ಲಿ ತುಂಬಿಕೊಂಡಿದೆ ಎಂದು ದೆಹಲಿ ಘಟಕದ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚದೇವಾ ಆರೋಪಿಸಿದ್ದಾರೆ. ದೆಹಲಿ ಸರ್ಕಾರ ಮತ್ತು ಅವರ ಅಧಿಕಾರಿಗಳ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವಾಗಿದೆ. ಇದೊಂದು ದುರಂತ ಅಲ್ಲ, ಕೊಲೆಯಾಗಿದೆ. ಸಚಿವೆ ಅತಿಶಿ ಮತ್ತು ಶಾಸಕ ದುರ್ಗೇಶ್ ಪಾಠಕ್ ಈ ಘಟನೆಗೆ ಕಾರಣರಾಗಿದ್ದು, ಇಬ್ಬರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ವೀರೇಂದ್ರ ಸಚದೇವಾ ಆಗ್ರಹಿಸಿದ್ದಾರೆ. ದೆಹಲಿಯಲ್ಲಿ ನಡೆದಿರುವ ಈ ದುರಂತ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ಭ್ರಷ್ಟಾಚಾರಕ್ಕೆ ಉದಾಹರಣೆಯಾಗಿದೆ. ಸಮಯಕ್ಕೆ ಸರಿಯಾಗಿ ಒಳಚರಂಡಿ ಸ್ವಚ್ಛಗೊಳಿಸದೇ ಇರೋದು ಈ ದುರಂತಕ್ಕೆ ಕಾರಣ ಎಂದು ವೀರೇಂದ್ರ ಪುನರುಚ್ಚಿಸಿದರು.
ಘಟನೆ ಕುರಿತು ಬಿಜೆಪಿ ಸಂಸದೆ ಬಾಂಸುರಿ ಸ್ವರಾಜ್ ಪ್ರತಿಕ್ರಿಯಿಸಿದ್ದು, ನೇರವಾಗಿ ಆಪ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಒಳಚರಂಡಿ ಸ್ವಚ್ಛಗೊಳಿಸುವಂತೆ ಸ್ಥಳೀಯರು ಹಲವು ಬಾರಿ ಮನವಿ ಮಾಡಿಕೊಂಡರೂ ಅಧಿಕಾರಿಗಳು ತೋರಿದ ನಿರ್ಲಕ್ಷ್ಯಕ್ಕೆ ಇಂದು ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಮಳೆಗಾಲಕ್ಕೂ ಮುನ್ನ ಒಳಚರಂಡಿಗಳನ್ನು ಸ್ವಚ್ಛಗೊಳಿಸಿದ್ದರೆ ಇಂತಹದೊಂದು ಅನಾಹುತ ಸಂಭವಿಸುತ್ತಿರಲಿಲ್ಲ. ಈ ಘಟನೆಗೆ ಸಿಎಂ ಅರವಿಂದ್ ಕೇಜ್ರಿವಾಲ್, ಶಾಸಕ ದುರ್ಗೇಶ್ ಪಾಠಕ್ ಹಾಗೂ ಎಎಪಿ ಸರ್ಕಾರವೇ ನೇರ ಹೊಣೆ ಎಂದು ಸಂಸದೆ ಸ್ವರಾಜ್ ಆರೋಪ ಮಾಡಿದ್ದಾರೆ.
ಮತ್ತೊಂದೆಡೆ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಸಹ ಎಎಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಐಎಎಸ್ ಕನಸು ಕಂಡು ದೆಹಲಿಗೆ ಬಂದಿದ್ದ ಮೂವರು ವಿದ್ಯಾರ್ಥಿಗಳು ಜಲಸಮಾಧಿಯಾಗಿದ್ದಾರೆ. ಮೃತರನ್ನು ಶ್ರೇಯಾ (25), ನೇವಿನ್ ಡೆಲ್ವಿನ್ (28) ಮತ್ತು ತಾನಿಯಾ (25) ಎಂದು ಪೊಲೀಸರು ಗುರುತಿಸಿದ್ದಾರೆ. ಇಂದು ಬೆಳಗ್ಗೆ ದೆಹಲಿಯ ರಾಜೇಂದ್ರ ನಗರದಲ್ಲಿ ಭಾರೀ ಮಳೆಯಾಗಿತ್ತು. ಸುಮಾರು 8 ಗಂಟೆಗೆ ಐಎಎಸ್ ತರಬೇತಿ ಕೇಂದ್ರದ ನೆಲಮಹಡಿಯಲ್ಲಿರುವ ಗ್ರಂಥಾಲಯಕ್ಕೆ ಮಳೆ ನೀರು ನುಗ್ಗಿದೆ. ನೀರಿನಲ್ಲಿ ಸಿಲುಕಿದ್ದ ಕೆಲ ವಿದ್ಯಾರ್ಥಿಗಳನ್ನು ಹಗ್ಗದ ಮೂಲಕ ರಕ್ಷಣೆ ಮಾಡಲಾಗಿದೆ.